ADVERTISEMENT

ಫ್ಯಾಕ್ಟ್‌ಚೆಕ್‌ | ಪುಟಿನ್‌ಗೆ ಭಾರತ ಯುದ್ಧ ವಿಮಾನಗಳ ಬೆಂಗಾವಲು; ವಿಡಿಯೊ ಸುಳ್ಳು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 1:00 IST
Last Updated 11 ಡಿಸೆಂಬರ್ 2025, 1:00 IST
   

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ವಿಮಾನವು ಭಾರತದ ವಾಯುಪ್ರದೇಶ ಪ್ರವೇಶಿಸಿದ ನಂತರ ಭಾರತೀಯ ವಾಯು ಪಡೆಯ ಯುದ್ಧ ವಿಮಾನಗಳು ಅವರ ವಿಮಾನಕ್ಕೆ ಬೆಂಗಾವಲಾಗಿ ಹಾರಾಟ ನಡೆಸಿದ್ದವು ಎಂದು ಪ್ರತಿಪಾದಿಸುತ್ತಾ, ಪುಟಿನ್‌ ಅವರು ವಿಮಾನದಿಂದ ಬೆಂಗಾವಲಾಗಿ ಹಾರಾಟ ನಡೆಸುತ್ತಿದ್ದ ಯುದ್ಧ ವಿಮಾನಗಳನ್ನು ವೀಕ್ಷಿಸುತ್ತಿರುವ ವಿಡಿಯೊವೊಂದನ್ನು ಬಳಕೆದಾರರೊಬ್ಬರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅದನ್ನು ಹಲವರು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು. ಅದು ಭಾರತಕ್ಕೆ ಸಂಬಂಧಿಸಿದ್ದಲ್ಲ.

ವಿಡಿಯೊದ ಕೀಫ್ರೇಮ್‌ ಒಂದನ್ನು ರಿವರ್ಸ್‌ ಇಮೇಜ್‌ ವಿಧಾನದಲ್ಲಿ ಗೂಗಲ್‌ ಲೆನ್ಸ್‌ನಲ್ಲಿ ಹಾಕಿ ಹುಡುಕಿದಾಗ, ಇದೇ ವಿಡಿಯೊವನ್ನು ಹೊಂದಿದ್ದ ಹಲವು ಪೋಸ್ಟ್‌ಗಳು ಸಿಕ್ಕಿದವು. ಅವೆಲ್ಲವೂ 2017ರಲ್ಲಿ ಮಾಡಲಾಗಿದ್ದ ಪೋಸ್ಟ್‌ಗಳಾಗಿದ್ದವು. ಅವುಗಳಲ್ಲಿ ಒಂದು ವಿಡಿಯೊವನ್ನು 2017ರ ಡಿಸೆಂಬರ್‌ 12ರಂದು ಅಪ್‌ಲೋಡ್‌ ಮಾಡಲಾಗಿತ್ತು. ಪುಟಿನ್‌ ಅವರು ಸಿರಿಯಾಕ್ಕೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅವರ ವಿಮಾನಕ್ಕೆ ಯುದ್ಧ ವಿಮಾನಗಳು ಬೆಂಗಾವಲಾಗಿ ಹಾರಾಟ ನಡೆಸಿದ್ದ ವಿಡಿಯೊ ಅದಾಗಿತ್ತು. ರಷ್ಯಾದ ಸರ್ಕಾರಿ ಸ್ವಾಮ್ಯದ ಸುದ್ದಿ ಜಾಲ ‘ಆರ್‌ಟಿ’ಯ ಲಾಂಛನ ಹೊಂದಿದ್ದ ಇದೇ ವಿಡಿಯೊವನ್ನು ಮತ್ತೊಂದು ಯೂಟ್ಯೂಬ್‌  ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿತ್ತು. ಅದರಲ್ಲಿ ಕೂಡ ಸಿರಿಯಾ ಭೇಟಿ ಸಂದರ್ಭದ ಬಗ್ಗೆ ಪ್ರಸ್ತಾಪ ಇತ್ತು. ಇದರ ಆಧಾರದಲ್ಲಿ ನಿರ್ದಿಷ್ಟ ಪದಗಳನ್ನು ಬಳಸಿ ಹುಡುಕಾಡಿದಾಗ ರಷ್ಯಾ ಮೂಲದ ಸ್ಪುಟ್ನಿಕ್‌ ನ್ಯೂಸ್‌, ಆರ್‌ಐಎ ನೊವೊಸ್ತಿ ಎಂಬ ಮಾಧ್ಯಮಗಳು ಕೂಡ 2017ರಲ್ಲಿ ಈ ವಿಡಿಯೊ ಸಹಿತ ಮಾಡಿದ್ದ ವರದಿಗಳು ಸಿಕ್ಕವು. ಬೆಂಗಾವಲಿಗಿದ್ದ ವಿಮಾನವೊಂದರ ಪೈಲಟ್‌ ಜೊತೆ ಮಾಡಲಾದ ಸಂದರ್ಶನವೂ ಸಿಕ್ಕಿತು. ಎಂಟು ವರ್ಷಗಳಷ್ಟು ಹಳೆಯ ವಿಡಿಯೊವನ್ನು ಪುಟಿನ್‌ ಅವರ ಭಾರತ ಭೇಟಿಯ ಸಂದರ್ಭದ ವಿಡಿಯೊ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಬೂಮ್‌ ಫ್ಯಾಕ್ಟ್‌ ಚೆಕ್‌ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT