ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಭಾರಿ ಮಳೆ ಸುರಿದಿದೆ. ಜಲಾವೃತಗೊಂಡ ರಸ್ತೆಯಲ್ಲಿ ರಿಕ್ಷಾವೊಂದು ಪ್ರಯಾಸದಿಂದಲೇ ಸಂಚರಿಸುತ್ತಾ ಮಗುಚಿ ಬೀಳುವ ವಿಡಿಯೊವೊಂದು ವೈರಲ್ ಆಗಿದೆ. ರಿಕ್ಷಾದಲ್ಲಿ ರಾಜ್ಯದ ಪೊಲೀಸರು ಇರುವುದನ್ನು ದೃಶ್ಯಗಳಲ್ಲಿ ಕಾಣಬಹುದು. ‘ಮುಖ್ಯಮಂತ್ರಿ ಯೋಗಿ ಆಡಳಿತದ ಅಭಿವೃದ್ಧಿ ಹೀಗಿದೆ ನೋಡಿ’ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಸೇವಾದಳ ಲೇವಡಿ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಭಾರಿ ಚರ್ಚೆಯೂ ಆಗಿತ್ತು.
ಈ ವಿಡಿಯೊ ರಾಜಸ್ಥಾನದ ದೌಸಾಗೆ ಸಂಬಂಧಿಸಿದ್ದು ಎಂದು ಲಾಜಿಕಲ್ ಇಂಡಿಯನ್ಫ್ಯಾಕ್ಟ್ಚೆಕ್ವೇದಿಕೆ ತಿಳಿಸಿದೆ. ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಪೊಲೀಸ್ ಇಲಾಖೆ, ಇದು ರಾಜ್ಯಕ್ಕೆ ಸಂಬಂಧಿಸಿದ್ದ ವಿಡಿಯೊ ಅಲ್ಲ ಎಂದು ಸ್ಪಷ್ಟಪಡಿಸಿದೆ. ಕೊಲಾನ ಜೈಲಿನ ಕಡೆಗೆ ಹೊರಟಿದ್ದ ರಿಕ್ಷಾದ ಚಾಲಕನು ನೀರು ತುಂಬಿದ ರಸ್ತೆಯಲ್ಲೇ ವಾಹನ ಓಡಿಸಿದ್ದಾನೆ. ಆದರೆ ಗುಂಡಿ ಇದ್ದಿದ್ದರಿಂದ ರಿಕ್ಷಾ ಪಲ್ಟಿಯಾಗಿದೆ. ಅಕ್ಟೋಬರ್ 1ರಂದು ಈ ಘಟನೆ ನಡೆದಿದೆ ಎಂದು ದೈನಿಕ್ ಭಾಸ್ಕರ್, ಪಂಜಾಬ್ ಕೇಸರಿ ಮೊದಲಾದ ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.