ADVERTISEMENT

Fact Check | ‘ಕೇರಳ ಮಾದರಿ’ ಎಂದು ಚೀನಾ ಚಿತ್ರ ಹಂಚಿಕೆ

ಫ್ಯಾಕ್ಟ್ ಚೆಕ್
Published 4 ಆಗಸ್ಟ್ 2024, 23:41 IST
Last Updated 4 ಆಗಸ್ಟ್ 2024, 23:41 IST
   

ಮನೆಯ ಮುಂದಿನ ಗೇಟ್‌ ಒಂದು, ಸುತ್ತಮುತ್ತ ಆವರಿಸಿರುವ ನೀರಿನಲ್ಲಿ ಮುಳುಗಿಹೋಗುವ ವಿಡಿಯೊ ಅನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದು ವಯನಾಡ್ ಜಿಲ್ಲೆಯಲ್ಲಿ ಭೂಕುಸಿತ ಹಾಗೂ ಪ್ರವಾಹದಿಂದ ಉಂಟಾಗಿರುವ ಅನಾಹುತದ ಒಂದು ಚಿತ್ರ ಎಂದು ಉಲ್ಲೇಖಿಸುತ್ತಿದ್ದಾರೆ. ಇದು ಎಡಪಂಥೀಯರ ಕೇರಳ ಮಾದರಿಯ ಒಂದು ನಿದರ್ಶನ ಎಂದೂ ಅವರು ಪ್ರತಿಪಾದನೆ ಮಾಡುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ವಿಡಿಯೊ ಮೇಲ್ಭಾಗದಲ್ಲಿ ಅದನ್ನು ಚಿತ್ರೀಕರಿಸಿದ ಸಮಯ ದಾಖಲಾಗಿದ್ದು, ಅದು ಜೂನ್ 16, 2024 ಎಂದಿದೆ. ವಯನಾಡ್‌ನಲ್ಲಿ ಭೂಕುಸಿತ ಸಂಭವಿಸಿದ್ದು ಜುಲೈ 30, 2024ರಂದು. ಜತೆಗೆ, ವಿಡಿಯೊ ಅನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ, ಅದು ಚೀನಾದ ಮಿಜೊವ್ ನಗರದ ಚಿತ್ರ ಎನ್ನುವುದು ತಿಳಿದುಬಂತು. ಈ ಬಗ್ಗೆ ಮತ್ತಷ್ಟು ಹುಡುಕಾಟ ನಡೆಸಿದಾಗ, ಅಲ್ಲಿನ ಜಲಾಶಯದ ಬಾಗಿಲುಗಳನ್ನು ಯಾವುದೇ ಮುನ್ಸೂಚನೆ ನೀಡದೇ ತೆರೆದದ್ದರಿಂದ ಕೆಲವು ಮನಗೆಳು ನೀರಿನಲ್ಲಿ ಮುಳುಗಿಹೋದವು ಎನ್ನುವುದು ತಿಳಿಯಿತು. ಈ ಬಗ್ಗೆ ಅಲ್ಲಿನ ಕೆಲವು ಮಾಧ್ಯಮಗಳು ವರದಿ ಮಾಡಿರುವುದು ಕಂಡುಬಂತು. ಚೀನಾದ ಈ ವಿಡಿಯೊ ಅನ್ನು ಕೆಲವರು ಕೇರಳದ ಭೂಕುಸಿತಕ್ಕೆ ತಳಕು ಹಾಕಿ, ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ. ಈ ಬಗ್ಗೆ ಬೂಮ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.           

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT