ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಸೇನಾಪಡೆಯ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರ ನಡುವೆ ತೀವ್ರ ಮನಸ್ತಾಪ ಉಂಟಾಗಿದೆ ಎನ್ನುವಂತೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ದೇಶದ ಸೇನೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ, ಉನ್ನತೀಕರಣ ಅಗತ್ಯವಿದೆ ಎಂದೂ ಅಲ್ಲಿಯವರೆಗೂ ಪಾಕಿಸ್ತಾನದೊಂದಿಗೆ ಸಂಘರ್ಷಕ್ಕೆ ಇಳಿಯಲು ಸೇನೆಯು ಆಸಕ್ತಿ ತೋರುವುದಿಲ್ಲ ಎಂದೂ ಸೇನಾ ಮುಖ್ಯಸ್ಥರ ಅಭಿಪ್ರಾಯ ಹೊಂದಿದ್ದಾರೆ ಎಂಬುದಾಗಿ ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಇದೇ ಒಕ್ಕಣೆಯ ಪೋಸ್ಟ್ ಅನ್ನು ಹಲವರು ಹಂಚಿಕೊಂಡಿದ್ದಾರೆ. ಈ ಬಗ್ಗೆ ಪ್ರೆಸ್ ಇನ್‌ಫರ್ಮೇಷನ್ ಬ್ಯೂರೊ (ಪಿಐಬಿ) ಫ್ಯಾಕ್ಟ್ ಚೆಕ್ ವರದಿ ಪ್ರಕಟಿಸಿದೆ. ಪಾಕಿಸ್ತಾನ ಮೂಲದ ಅಕೌಂಟ್‌ಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಸೇನಾ ಮುಖ್ಯಸ್ಥರ ನಡುವೆ ಮನಸ್ತಾಪ ಇದೆ ಎನ್ನುವಂತೆ ಸುಳ್ಳು ಕಥನ ಕಟ್ಟುತ್ತಿವೆ. ಈ ಮೂಲಕ ಭಾರತೀಯರ ದಾರಿ ತಪ್ಪಿಸಲು, ಜನರ ನಂಬಿಕೆಯನ್ನು ಹಾಳು ಮಾಡಲು ಯತ್ನಿಸುತ್ತಿವೆ ಎಂದು ಪಿಐಬಿ ವರದಿ ತಿಳಿಸಿದೆ.
‘ಆಪರೇಷನ್ ಸಿಂಧೂರದಲ್ಲಿ’ ಭಾರತದ ರಪೇಲ್ ವಿಮಾನಗಳು ಮತ್ತು ಎಸ್–400 ವಾಯು ರಕ್ಷಣಾ ವ್ಯವಸ್ಥೆಗೆ ಹಾನಿಯಾಗಿದೆ ಎಂದು ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಹೇಳಿದ್ದಾರೆ ಎನ್ನಲಾಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ದ್ವಿವೇದಿ ಅವರು ಇಂಥ ಯಾವುದೇ ಹೇಳಿಕೆ ನೀಡಿಲ್ಲ. ಅವರು ಬೇರೊಂದು ಸಂದರ್ಭದಲ್ಲಿ ಮಾತನಾಡಿರುವ ವಿಡಿಯೊ ಅನ್ನು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೂಲಕ ತಿರುಚಿ, ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ. ಇದು ಕೂಡ ಪಾಕಿಸ್ತಾನದ ಕೆಲವರು ಭಾರತದ ವಿರುದ್ಧ ನಡೆಸುತ್ತಿರುವ ಸುಳ್ಳು ಸುದ್ದಿ ಅಭಿಯಾನದ ಭಾಗವಾಗಿದೆ ಎಂದು ಪಿಐಬಿ ಫ್ಯಾಕ್ಟ್ ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.