ADVERTISEMENT

ಅಂಗೀಕಾರಗೊಳ್ಳದ ಮಸೂದೆಗಳು: ಸರ್ಕಾರಕ್ಕೆ ಸಿನ್ಹಾ ತಿರುಗೇಟು

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 19:30 IST
Last Updated 17 ಜುಲೈ 2012, 19:30 IST

ನವದೆಹಲಿ (ಪಿಟಿಐ): ಮಸೂದೆಗಳಿಗೆ ಅಂಗೀಕಾರ ಪಡೆಯುವುದಕ್ಕೆ ವಿಫಲವಾಗಿರುವುದು ಸರ್ಕಾರದ ವೈಫಲ್ಯವೇ ಹೊರತು ಸಂಸದೀಯ ಸ್ಥಾಯಿ ಸಮಿತಿಯ ವಿಳಂಬ ಅದಕ್ಕೆ ಕಾರಣವಲ್ಲ ಎಂದು ಸಮಿತಿ ಅಧ್ಯಕ್ಷ ಯಶವಂತ್ ಸಿನ್ಹಾ ತಿರುಗೇಟು ನೀಡಿದ್ದಾರೆ.

ಪರೋಕ್ಷ ತೆರಿಗೆಗಳ ಹೊಸ ಕಾಲಮಾನವನ್ನು ಸಾರಲಿರುವ ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್‌ಟಿ) ಸಂಬಂಧಿಸಿದ ವರದಿಯನ್ನು ತಮ್ಮ ಸಮಿತಿಯು ಮುಂಬರುವ ಮುಂಗಾರು ಅಧಿವೇಶನದಲ್ಲಿ ಮಂಡಿಸಲಿದೆ ಎಂದು ಇದೇ ವೇಳೆ ಸಿನ್ಹಾ ತಿಳಿಸಿದರು. ಮುಂಗಾರು ಅಧಿವೇಶನ ಆಗಸ್ಟ್ ಮೊದಲ ವಾರ ಆರಂಭವಾಗುವ ನಿರೀಕ್ಷೆಯಿದೆ.

ತಮ್ಮ ಸಮಿತಿ ಈವರೆಗೆ ಒಂಬತ್ತು ಮಸೂದೆಗಳಿಗೆ ಸಂಬಂಧಿಸಿದಂತೆ ಅಭಿಪ್ರಾಯ ಸಲ್ಲಿಸಿದೆ. ಆದರೆ ಅವುಗಳಲ್ಲಿ ಒಂದೇ ಒಂದು ಮಸೂದೆಯೂ ಕಾನೂನಾಗಿ ಜಾರಿಗೊಂಡಿಲ್ಲ ಎಂದು ಅವರು ಸರ್ಕಾರದೆಡೆಗೆ ಬೆಟ್ಟು ಮಾಡಿದರು.

ಹಣಕಾಸು ಕ್ಷೇತ್ರಕ್ಕೆ ಸಂಬಂಧಿಸಿದ ಮಸೂದೆಗಳ ಪರಿಶೀಲನೆಯನ್ನು ತ್ವರಿತಗೊಳಿಸಲಾಗಿದೆ.  ಜಿಎಸ್‌ಟಿ ಮಸೂದೆ ಪರಿಶೀಲಿಸಲು ಸಮಿತಿ ಪ್ರತಿ ವಾರ ಸಭೆ ನಡೆಸಲಾಗುತ್ತಿದೆ ಎಂದು ಮಾಜಿ ಹಣಕಾಸು ಸಚಿವರೂ ಆದ ಸಿನ್ಹಾ ತಿಳಿಸಿದರು.

ಸಂವಿಧಾನ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ತುಂಬಾ ಜಾಗರೂಕವಾಗಿ ಪರಿಶೀಲಿಸುವ ಅಗತ್ಯವಿದೆ ಎಂದರು.

ಬಜೆಟ್‌ಗಿಂತ ಮುಂಚೆ ಬಾಕಿ ಇದ್ದ ಎಲ್ಲ ಕರಡು ಮಸೂದೆಗಳ ಪರಿಶೀಲನೆ ಮುಗಿಸಲಾಗಿದೆ. ಈಗ ಅವುಗಳನ್ನು ಜಾರಿಗೆ ತರುವುದು ಸರ್ಕಾರದ ಅಂಗಳದಲ್ಲಿದೆ ಎಂದು ಸಿನ್ಹಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.