ADVERTISEMENT

ಅಂಚೆ ಸೇವಕರ ಮೂಲವೇತನ 3 ಪಟ್ಟು ಏರಿಕೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 20:23 IST
Last Updated 6 ಜೂನ್ 2018, 20:23 IST
ಅಂಚೆ ಸೇವಕರ ಮೂಲವೇತನ 3 ಪಟ್ಟು ಏರಿಕೆ
ಅಂಚೆ ಸೇವಕರ ಮೂಲವೇತನ 3 ಪಟ್ಟು ಏರಿಕೆ   

ನವದೆಹಲಿ: ಗ್ರಾಮೀಣ ಅಂಚೆ ಸೇವಕರ ಮೂಲವೇತನವನ್ನು ₹14,500ರವರೆಗೆ ಹೆಚ್ಚಿಸಲು ಕೇಂದ್ರ ಸಂಪುಟ ಮಂಗಳವಾರ ನಿರ್ಧರಿಸಿದೆ.

ಈ ಏರಿಕೆಯು 2016ರ ಜನವರಿ 1ರಿಂದ ಪೂರ್ವಾನ್ವಯ ಆಗಲಿದೆ. ‍ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಿತು ಎಂದು ಸಂವಹನ ಸಚಿವ ಮನೋಜ್‌ ಸಿನ್ಹಾ ತಿಳಿಸಿದ್ದಾರೆ.

ಅಂಚೆ ಸೇವಕರಿಗೆ ಮೂಲ ವೇತನವಲ್ಲದೆ ಇತರ ಭತ್ಯೆಗಳು ದೊರೆಯುತ್ತವೆ. ಇದೇ ಮೊದಲ ಬಾರಿಗೆ, ಅವರಿಗೆ ಅಪಾಯ ಮತ್ತು ಕಠಿಣ ಕೆಲಸದ ಭತ್ಯೆ ನೀಡಲು ನಿರ್ಧರಿಸಲಾಗಿದೆ.

ADVERTISEMENT

ಈ ತನಕ ಇವರು ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದರು. ಇನ್ನು ಮುಂದೆ ಎರಡು ಪಾಳಿಗಳಷ್ಟೇ ಇರುತ್ತವೆ ಎಂದು ಸಿನ್ಹಾ ತಿಳಿಸಿದ್ದಾರೆ.

ಅಂಚೆ ಸೇವಕರು ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟರೆ ಅವರ ಅವಲಂಬಿತರಿಗೆ ಉದ್ಯೋಗ ನೀಡುವ ವ್ಯವಸ್ಥೆಗೂ ಸಂಪುಟ ಒಪ್ಪಿಗೆ ನೀಡಿದೆ. ಮೊದಲು ಈ ಅವಕಾಶ ಇರಲಿಲ್ಲ.

ತುಟ್ಟಿ ಭತ್ಯೆಯನ್ನು ಪ್ರತ್ಯೇಕವಾಗಿ ನೀಡಲಾಗುವುದು ಎಂದೂ ಸಿನ್ಹಾ ಹೇಳಿದ್ದಾರೆ. 1.6 ಲಕ್ಷ ಗ್ರಾಮೀಣ ಅಂಚೆ ಸೇವಕರಿಗೆ ಸರ್ಕಾರದ ಈ ನಿರ್ಧಾರದಿಂದ ಪ್ರಯೋಜನ ದೊರೆಯಲಿದೆ.

ಮೂಲವೇತನದಲ್ಲಿ ಮೂರು ಪಟ್ಟು ಏರಿಕೆಯಾಗಿದ್ದರೆ ಒಟ್ಟು ವೇತನ ಶೇ 56ರಷ್ಟು ಹೆಚ್ಚಳವಾಗಲಿದೆ. ಗ್ರಾಮೀಣ ಅಂಚೆ ಸೇವಕರಿಗೆ ಈಗ ಶೇ 142ರಷ್ಟು ತುಟ್ಟಿ ಭತ್ಯೆ ನೀಡಲಾಗುತ್ತಿದೆ. ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದಿರುವುದರಿಂದ ಇನ್ನು ಮುಂದೆ ತುಟ್ಟಿ ಭತ್ಯೆಯು ಮೂಲ ವೇತನದ ಶೇ 7ರಷ್ಟಿರಲಿದೆ.

ಗ್ರಾಮೀಣ ಅಂಚೆ ಸೇವಕರ ಕನಿಷ್ಠ ವೇತನವನ್ನು ತಿಂಗಳಿಗೆ ಕನಿಷ್ಠ ₹10 ಸಾವಿರ ಮತ್ತು ಗರಿಷ್ಠ ₹35,480ಕ್ಕೆ ಏರಿಕೆ ಮಾಡಲಾಗಿದೆ.

ಪ್ರತಿ ವರ್ಷ ಹೆಚ್ಚಳ

ಗ್ರಾಮೀಣ ಅಂಚೆ ಸೇವಕರ ಬೇಡಿಕೆಯಂತೆ ಪ್ರತಿ ವರ್ಷ ಶೇ 3ರಷ್ಟು ವೇತನ ಏರಿಕೆಗೆ ನಿರ್ಧರಿಸಲಾಗಿದೆ. ಜನವರಿ 1 ಅಥವಾ ಜುಲೈ 1ರಂದು ಈ ಏರಿಕೆ ಜಾರಿಗೆ ಬರಲಿದೆ.

ಭತ್ಯೆ ಏರಿಕೆ: ಸಂಯುಕ್ತ ಭತ್ಯೆಯನ್ನು ₹100ರಿಂದ ₹500ಕ್ಕೆ ಏರಿಸಲಾಗಿದೆ. ಬೋಟ್‌ ಭತ್ಯೆ ₹50ರಿಂದ ₹115ಕ್ಕೆ ಹೆಚ್ಚಳವಾಗಲಿದೆ. ಒಟ್ಟು ಕರ್ತವ್ಯ ಸಂಬಂಧಿ ಭತ್ಯೆಯನ್ನು ಕನಿಷ್ಠ ₹1,170ರಿಂದ ಗರಿಷ್ಠ ₹2,340ಕ್ಕೆ ಏರಿಸಲಾಗಿದೆ.

ಸಕ್ಕರೆ ಉದ್ಯಮಕ್ಕೆ ₹8,500 ಕೋಟಿ ಪ್ಯಾಕೇಜ್‌
ನವದೆಹಲಿ (ಪಿಟಿಐ):
ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಸಕ್ಕರೆ ಉದ್ಯಮಕ್ಕೆ ₹8,500 ಕೋಟಿಯ ಪ್ಯಾಕೇಜ್‌ ನೀಡಲು ಕೇಂದ್ರ ಸಂಪುಟ ನಿರ್ಧರಿಸಿದೆ.

ಸಕ್ಕರೆಯ ಕಾಪು ದಾಸ್ತಾನು, ಎಥೆನಾಲ್‌ ಉತ್ಪಾದನೆಯ ಸಾಮರ್ಥ್ಯ ಹೆಚ್ಚಳ ಮತ್ತು ಸಕ್ಕರೆ ಕಾರ್ಖಾನೆಗಳ ನಷ್ಟ ಕಮ್ಮಿ ಮಾಡಲು ಕನಿಷ್ಠ ಮಾರಾಟ ಬೆಲೆ ನಿಗದಿಗಾಗಿ ಈ ಮೊತ್ತವನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಒಟ್ಟು ಪ್ಯಾಕೇಜ್‌ನಲ್ಲಿ ಎಥೆನಾಲ್‌ ಉತ್ಪಾದನೆ ಸಾಮರ್ಥ್ಯ ಹೆಚ್ಚಳ, 30 ಲಕ್ಷ ಟನ್‌ ಸಕ್ಕರೆ ಕಾಪು ದಾಸ್ತಾನಿಗಾಗಿ ₹4,440 ಕೋಟಿ ನಿಗದಿ ಮಾಡಲಾಗಿದೆ. ಕಾರ್ಖಾನೆಗಳು ಸಕ್ಕರೆ ಮಾರುವ ಕನಿಷ್ಠ ಬೆಲೆಯನ್ನು ಕೆ.ಜಿ.ಗೆ ₹29ಕ್ಕೆ ನಿಗದಿ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಸಕ್ಕರೆ ಮಾರಾಟಕ್ಕೆ ಕನಿಷ್ಠ ಬೆಲೆಯನ್ನು ನಿಗದಿ ಮಾಡಲಾಗಿದೆ.

ಆದರೆ, ಈ ಕನಿಷ್ಠ ಬೆಲೆ ನಿಗದಿಗೆ ಉದ್ಯಮದಿಂದ ಟೀಕೆ ವ್ಯಕ್ತವಾಗಿದೆ. ₹29ಕ್ಕೆ ಮಾರಾಟ ಮಾಡಿದರೆ ಉತ್ಪಾದನಾ ವೆಚ್ಚವೇ ದೊರೆಯದು ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್‌ಎಂಎ) ಹೇಳಿದೆ.

ರೈತರಿಗೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಮೊತ್ತ ₹22 ಸಾವಿರ ಕೋಟಿಗೂ ಹೆಚ್ಚು. ಕೇಂದ್ರ ನೀಡಿರುವ ₹8,500 ಕೋಟಿ ಎಲ್ಲಿಗೂ ಸಾಲದು ಎಂದು ಸಹಕಾರಿ ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಯ ಒಕ್ಕೂಟ (ಎನ್‌ಎಫ್‌ಸಿಎಸ್‌ಎಫ್‌) ಹೇಳಿದೆ.

ಉತ್ತರ ಪ್ರದೇಶದಲ್ಲಿನ ಪ್ರಮುಖ ಕಬ್ಬು ಬೆಳೆಯುವ ಪ್ರದೇಶವಾದ ಕೈರಾನಾ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಸೋತಿರುವುದರಿಂದಲೇ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಉಪಚುನಾವಣೆ ಫಲಿತಾಂಶ ಬಂದು ಕೆಲವೇ ದಿನಗಳಲ್ಲಿ ಪ್ಯಾಕೇಜ್ ನೀಡಿಕೆ ನಿರ್ಧಾರ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.