ADVERTISEMENT

ಅಂತರಜಾತಿ ಮದುವೆ: ಯಾರಿಗೂ ಹಸ್ತಕ್ಷೇಪದ ಹಕ್ಕಿಲ್ಲ

ಪಿಟಿಐ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST
ಅಂತರಜಾತಿ ಮದುವೆ: ಯಾರಿಗೂ ಹಸ್ತಕ್ಷೇಪದ ಹಕ್ಕಿಲ್ಲ
ಅಂತರಜಾತಿ ಮದುವೆ: ಯಾರಿಗೂ ಹಸ್ತಕ್ಷೇಪದ ಹಕ್ಕಿಲ್ಲ   

ನವದೆಹಲಿ: ಅಂತರಧರ್ಮೀಯ ಅಥವಾ ಅಂತರಜಾತಿ ವಿವಾಹದಲ್ಲಿ ಜಾತಿ ಪಂಚಾಯತಿಗಳು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಸ್ಪಷ್ಟವಾಗಿ ಹೇಳಿದೆ.

ಇಬ್ಬರು ವಯಸ್ಕರ ನಡುವಣ ಮದುವೆಯಲ್ಲಿ ಜಾತಿ ಪಂಚಾಯತಿಗಳ ಮಧ್ಯ ಪ್ರವೇಶ ಕಾನೂನುಬಾಹಿರ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಇಂತಹ ವಿವಾಹಗಳನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿರುವ ಪೀಠ, ಜಾತಿ ಪಂಚಾಯತಿಗಳ ಹಸ್ತಕ್ಷೇಪ ತಡೆಯಲು ಮಾರ್ಗಸೂಚಿ ರೂಪಿಸಿದೆ. ಸಂಸತ್ತು ಕಾನೂನು ರೂಪಿಸುವವರೆಗೂ ಈ ಮಾರ್ಗಸೂಚಿಗಳು ಜಾರಿಯಲ್ಲಿರುತ್ತವೆ ಎಂದು ಹೇಳಿದೆ.

ADVERTISEMENT

ಅಂತರಜಾತಿ ವಿವಾಹವಾದ ದಂಪತಿಗೆ ಮರ್ಯಾದೆಗೇಡು ಹತ್ಯೆಗಳಿಂದ ರಕ್ಷಣೆ ನೀಡುವಂತೆ ಶಕ್ತಿವಾಹಿನಿ ಸ್ವಯಂಸೇವಾ ಸಂಸ್ಥೆ 2010ರಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮೂವರು ನ್ಯಾಯಮೂರ್ತಿಗಳ ಪೀಠ ಈ ಆದೇಶ ನೀಡಿದೆ. ಮಾರ್ಚ್‌ ಒಳಗಾಗಿ ಅಂತಿಮ ತೀರ್ಪು ಹೊರ ಬೀಳಲಿದೆ.

ಅಂತರಜಾತಿ ಮದುವೆ ಆದವರಿಗೆ ಅವರ ಸಂಬಂಧಿಗಳಾಗಲಿ ಅಥವಾ ಬೇರೆ ಯಾರೇ ಆಗಲಿ ಬೆದರಿಕೆ ಒಡ್ಡುವಂತಿಲ್ಲ ಎಂದು ಕೋರ್ಟ್‌ ಈ ಹಿಂದಿನ ವಿಚಾರಣೆ ವೇಳೆಯೂ ಹೇಳಿತ್ತು.

ಕಾನೂನಿಗೆ ಪರ್ಯಾಯವಲ್ಲ:
ಜಾತಿ ಪಂಚಾಯತಿಗಳೂ ಕಾನೂನಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ಅವುಗಳನ್ನು ಸಮುದಾಯದ ಗುಂಪು ಅಥವಾ ಜನಸಮೂಹ ಎಂದು ಮಾತ್ರ ಪರಿಗಣಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ದಂಪತಿ ರಕ್ಷಣೆ: ರಾಜ್ಯದ ಹೊಣೆ
ಒಂದು ವೇಳೆ ಅಂತರಜಾತಿ ಮದುವೆಯಾದ ದಂಪತಿ ತಮಗೆ ಬೆದರಿಕೆ ಇರುವುದನ್ನು ವಿವಾಹ ನೋಂದಣಿ ಅಧಿಕಾರಿಗಳ ಗಮನಕ್ಕೆ ತಂದರೆ ಅಂತಹವರಿಗೆ ರಾಜ್ಯ ಸರ್ಕಾರಗಳು ರಕ್ಷಣೆ ಒದಗಿಸುತ್ತವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಜಾತಿ ಪಂಚಾಯತಿಗಳಿಂದ ಮಹಿಳೆಯರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ದೌರ್ಜನ್ಯ ತಡೆಯಲು ಪೊಲೀಸರಿಂದ ಸಾಧ್ಯವಾಗುತ್ತಿಲ್ಲ. ಅವುಗಳ ಕಾರ್ಯವೈಖರಿ ಮೇಲೆ ನಿಗಾ ಇಡಲು ವ್ಯವಸ್ಥೆಯೊಂದನ್ನು ರೂಪಿಸುವಂತೆ ಕೇಂದ್ರ ಸರ್ಕಾರ ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು.

ಜಾತಿ ಪಂಚಾಯತಿಗಳು ಪ್ರಭಾವಶಾಲಿಯಾಗಿರುವ ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನ ರಾಜ್ಯಗಳ ಮೂರು ಜಿಲ್ಲೆಗಳ ಪರಿಸ್ಥಿತಿಯ ಮೇಲೆ ನಿಗಾ ಇರಿಸುವುದಾಗಿ ಕೋರ್ಟ್‌ ಹೇಳಿತ್ತು.

ಜಾತಿ ಪಂಚಾಯತಿ: ಉತ್ತರದಲ್ಲಿ ಜೋರು
ಉತ್ತರ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಜಾತಿ ಪಂಚಾಯತಿಗಳ ಹಾವಳಿ ಹೆಚ್ಚಾಗಿದೆ.

ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಹರಿಯಾಣ ಈ ಮೂರು ರಾಜ್ಯಗಳಲ್ಲಿ ಪ್ರಭಾವ ಹೊಂದಿರುವ ಇಂತಹ ಪಂಚಾಯತಿಗಳು ಕಾನೂನಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತಿವೆ.

ಸಂಪ್ರದಾಯಗಳಿಗೆ ಜೋತು ಬಿದ್ದ ನಿರ್ದಿಷ್ಟ ಜಾತಿ ಮತ್ತು ಸಮುದಾಯಗಳ ಇಂತಹ ಗುಂಪುಗಳು ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ನ್ಯಾಯಾಲಯಗಳಂತೆ ಕೆಲಸ ಮಾಡುತ್ತವೆ. ಹೆಚ್ಚಾಗಿ ಮಹಿಳೆಯರೇ ಈ ಪಂಚಾಯತಿಗಳ  ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.