ADVERTISEMENT

ಅಂಬಾನಿ ಐಟಿ ಖಾತೆಗೆ ಕನ್ನ ಹಾಕಿದ ಸಿಎ ವಿದ್ಯಾರ್ಥಿನಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 19:59 IST
Last Updated 13 ಸೆಪ್ಟೆಂಬರ್ 2013, 19:59 IST

ಮುಂಬೈ (ಪಿಟಿಐ): ದೇಶದ ಪ್ರಮುಖ ಉದ್ಯಮಿ ಅನಿಲ್‌ ಅಂಬಾನಿ ಅವರ ಆದಾಯ ತೆರಿಗೆ ಲೆಕ್ಕ ಪತ್ರಗಳ ವಿವರ ಸಲ್ಲಿಕೆಯ ಆನ್‌ಲೈನ್‌ ಖಾತೆ­ಯನ್ನು ಹ್ಯಾಕ್‌ ಮಾಡಿದ ಆರೋಪವನ್ನು ಹೈದರಾಬಾದ್‌ನ ಲೆಕ್ಕ ಪರಿಶೋಧನಾ (ಚಾರ್ಟರ್ಡ್ ಅಕೌಂಟೆಂಟ್‌–ಸಿಎ) ವಿದ್ಯಾರ್ಥಿನಿ­ಯೊಬ್ಬಳು ಎದುರಿಸು­ತ್ತಿದ್ದಾಳೆ.
ಅನಿಲ್‌ ಅಂಬಾನಿ ಅವರ ಆದಾಯ ಮತ್ತು ನಿರ್ದಿಷ್ಟ ಅವಧಿಯಲ್ಲಿ ಅವರು ಪಾವತಿಸಿರುವ ತೆರಿಗೆ ಮೊತ್ತವನ್ನು ತಿಳಿದುಕೊಳ್ಳುವ ಉದ್ದೇಶದಿಂದ ವಿದ್ಯಾರ್ಥಿನಿ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಹೈದರಾಬಾದ್‌ನ ಮನೋಜ್ ದಗಾ ಆಂಡ್‌ ಕಂಪೆನಿಯಲ್ಲಿ ಚಾರ್ಟರ್ಡ್ ಅಕೌಂಟೆನ್ಸಿ ತರಬೇತಿ ಪಡೆಯುತ್ತಿರುವ 21 ವರ್ಷದ ಯುವತಿ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿರ್ದಿಷ್ಟ  ಕಲಂಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸ­ಲಾಗಿದ್ದು, ಆಕೆ ಬಂಧನದ ಭೀತಿಯನ್ನು ಎದುರಿಸು­ತ್ತಿದ್ದಾಳೆ.

ಅನಿಲ್‌ ಧೀರೂಭಾಯಿ ಅಂಬಾನಿ ಸಮೂಹದ ಅಧ್ಯಕ್ಷರಾಗಿರುವ ಅನಿಲ್‌ ಅಂಬಾನಿ ಅವರ ಆದಾಯ ತೆರಿಗೆ ಲೆಕ್ಕ ಪತ್ರಗಳ ವಿವರ ಸಲ್ಲಿಕೆಯ ಆನ್‌ಲೈನ್‌ ಖಾತೆಗೆ ಕನ್ನ ಹಾಕಿದ ಯುವತಿ, ಅಂಬಾನಿ ಅವರ ಆದಾಯದ ವಿವರ, ಪಾವತಿಸಿರುವ ತೆರಿಗೆ ಮೊತ್ತದ ವಿವರ, ಪ್ಯಾನ್‌ ಕಾರ್ಡ್ ಸಂಖ್ಯೆಯನ್ನು ಸಂಗ್ರಹಿಸಿದ್ದಾಳೆ. ಅಲ್ಲದೇ ಎರಡು ಬಾರಿ ಖಾತೆಯ ಪಾಸ್‌ವರ್ಡ್ ಬದಲಿಸಿ­ದ್ದಾಳೆ’ ಎಂದು ತನಿಖೆಯಲ್ಲಿ ಭಾಗಿ­ಯಾ­ಗಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಂಬಾನಿ ಅವರ ವೈಯಕ್ತಿಕ ಆದಾಯ ವಿವರಗಳನ್ನು ಸಲ್ಲಿಸಿದ್ದ ಮುಂಬೈನ ಲೆಕ್ಕ ಪರಿಶೋಧನಾ ಸಂಸ್ಥೆ­ಗೆ ಆದಾಯ ತೆರಿಗೆ ಇಲಾಖೆಯಿಂದ ಜೂನ್‌ 26ರಂದು ಬಂದಿದ್ದ ಮೇಲ್‌ನಲ್ಲಿ ಅಂಬಾನಿ­ಯವರ ಆನ್‌ಲೈನ್‌ ಐಟಿ ಖಾತೆಯಲ್ಲಿ ಆಗಿರುವ ಬದಲಾವಣೆ ಬಗ್ಗೆ ಮಾಹಿತಿ ನೀಡ­ಲಾಗಿತ್ತು. ಜುಲೈ 12ರಂದು ಖಾತೆಯ ಪಾಸ್‌­ವರ್ಡ್ ಬದಲಾದ ಬಗ್ಗೆ ಕಂಪೆನಿಗೆ ಮತ್ತೆ ತೆರಿಗೆ ಇಲಾಖೆಯಿಂದ ಇ–ಮೇಲ್‌ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ಬಾರಿ ಖಾತೆಯ ಪಾಸ್‌ವರ್ಡ್ ಬದಲಾಗಿದ್ದರಿಂದ ಸಂಶಯಗೊಂಡ ಅಂಬಾನಿ ಸಮೂಹದ ಪ್ರತಿನಿಧಿಗಳು ಮುಂಬೈನ ಜಂಟಿ ಪೊಲೀಸ್‌ ಕಮಿಷನರ್‌ (ಅಪರಾಧ) ಹಿಮಾಂಶು ರಾಯ್‌ ಅವರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸುವಂತೆ ರಾಯ್‌ ಅವರು ಸೈಬರ್‌ ಸೆಲ್‌ ಪೊಲೀಸರಿಗೆ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.