ADVERTISEMENT

ಅಂಬಾನಿ ದಂಪತಿ ಸೇರಿ 13 ಜನರಿಗೆ ಸಮನ್ಸ್

2 ಜಿ ತರಂಗಾಂತರ ಹಗರಣ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 19:59 IST
Last Updated 19 ಜುಲೈ 2013, 19:59 IST

ನವದೆಹಲಿ (ಪಿಟಿಐ): `2 ಜಿ ತರಂಗಾಂತರ ಹಗರಣದ ವಿಚಾರಣೆಯಲ್ಲಿ ರಿಲಯನ್ಸ್ ಎಡಿಎ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ, ಅವರ ಪತ್ನಿ ಟೀನಾ ಅಂಬಾನಿ ಹಾಗೂ ಇತರ 11 ಜನರು ಸಾಕ್ಷಿಗಳಾಗಿ ಹೇಳಿಕೆ ನೀಡುವುದು ಅಗತ್ಯ' ಎಂದು ಹೇಳಿದ ನ್ಯಾಯಾಲಯ, ಈ ಸಂಬಂಧ ಇವರೆಲ್ಲರಿಗೂ ಸಮನ್ಸ್ ಜಾರಿಗೆ ಆದೇಶಿಸಿತು.

`ಪ್ರಕರಣದಲ್ಲಿ ಸೂಕ್ತ ತೀರ್ಪು ನೀಡಬೇಕಾದರೆ ಈ ಸಾಕ್ಷಿಗಳು ನೀಡುವ ಹೇಳಿಕೆಗಳ ಪರಿಶೀಲನೆ ಅಗತ್ಯ' ಎಂದು ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ.ಸೈನಿ ಶುಕ್ರವಾರ ಹೇಳಿದರು.

`ಸ್ವಾನ್ ಟೆಲಿಕಾಂ ಕಂಪೆನಿ ಮೂಲಕ ರಿಲಯನ್ಸ್ ಎಡಿಎ ಕಂಪೆನಿ 990 ಕೋಟಿ ರೂಪಾಯಿಯನ್ನು ನಿಯಮಬಾಹಿರವಾಗಿ ಹೂಡಿಕೆ ಮಾಡಿದೆ ಎನ್ನಲಾಗಿದ್ದು, ಈ ಸಂಬಂಧ ಅನಿಲ್ ಅಂಬಾನಿ ಅವರ ಹೇಳಿಕೆ `ಬೆಳಕು ಚೆಲ್ಲಬಲ್ಲದು'; ಹೀಗಾಗಿ ಅವರನ್ನು ಸಾಕ್ಷಿಯಾಗಿ ಕರೆಸಬೇಕು' ಎಂದು ಸಿಬಿಐ, ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಕೋರಿತ್ತು.

ನಕಲಿ ಕಂಪೆನಿಗಳ ಹಿನ್ನೆಲೆಯ ಬಗ್ಗೆ ತಿಳಿಯಲು ಅನಿಲ್ ಅಂಬಾನಿ ಅವರನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ. 990 ಕೋಟಿ ರೂಪಾಯಿ ಹೂಡಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾದ ಸಭೆಗೆ ಹಾಜರಾಗಿಲ್ಲದೇ ಇರಬಹುದು. ಆದರೆ ಈ ಸಂಬಂಧದ ಎಲ್ಲಾ ವಿದ್ಯಮಾನಗಳು ಅವರಿಗೆ ಗೊತ್ತಿದ್ದವು ಎಂದು ಸಿಬಿಐ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಯು.ಯು.ಲಲಿತ್ ಅವರು ವಾದಿಸಿದ್ದರು.

ಮೊತ್ತದ ಮೇಲೆ ಯಾವುದೇ ಮಿತಿ ಇಲ್ಲದಂತೆ ಚೆಕ್‌ಗೆ ಸಹಿ ಹಾಕುವ ಅಧಿಕಾರ ಟೀನಾ ಅಂಬಾನಿ ಅವರಿಗೆ ಇತ್ತು. 990 ಕೋಟಿ ರೂಪಾಯಿ ಹೂಡಿಕೆ ಸಂಬಂಧ ನಡೆದಿದ್ದ ಎಲ್ಲಾ ಪ್ರಮುಖ ಸಭೆಗಳಲ್ಲಿ ಅವರು ಭಾಗವಹಿಸಿದ್ದರು ಎಂದೂ ಸಿಬಿಐ ಹೇಳಿತ್ತು.

`ಈ ಪ್ರಕರಣದಲ್ಲಿ ಅಂಬಾನಿ ದಂಪತಿ ಮತ್ತು ಇತರರನ್ನು ಬೇಕೆಂತಲೇ ಎಳೆದು ತರಲು ಸಿಬಿಐ ಯತ್ನಿಸುತ್ತಿದೆ. ವಿಚಾರಣೆ ಪ್ರಕ್ರಿಯೆಯ ಕಡೆಯ ಹಂತದಲ್ಲಿ ಸಿಬಿಐ ಅರ್ಜಿ ಹಾಕಿರುವುದೇ ಅದರ ಉದ್ದೇಶವನ್ನು ತೋರಿಸುತ್ತದೆ' ಎಂದು ಅಂಬಾನಿ ಪರ ವಕೀಲರು ವಾದಿಸಿದ್ದರು.
ಆದರೆ ಈ ವಾದವನ್ನು ನ್ಯಾಯಾಧೀಶರು ಒಪ್ಪಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.