ADVERTISEMENT

ಅಕ್ಬರ್ ರಸ್ತೆಗೆ ಮಹಾರಾಣಾ ಪ್ರತಾಪ್‌ ಹೆಸರು!

ಪಿಟಿಐ
Published 9 ಮೇ 2018, 19:30 IST
Last Updated 9 ಮೇ 2018, 19:30 IST
ನಾಮಫಲಕದ ಮೇಲೆ ಅಂಟಿಸಲಾದ ಹಾಳೆ
ನಾಮಫಲಕದ ಮೇಲೆ ಅಂಟಿಸಲಾದ ಹಾಳೆ   

ನವದೆಹಲಿ: ದೇಶದ ಗಣ್ಯ ರಾಜಕಾರಣಿಗಳು, ಕೇಂದ್ರ ಸಚಿವರು ವಾಸಿಸುವ ನಗರದ ಪ್ರತಿಷ್ಠಿತ ಅಕ್ಬರ್‌ ರಸ್ತೆ ನಾಮಫಲಕದ ಮೇಲೆ ಕಿಡಿಗೇಡಿಗಳು ‘ಮಹಾರಾಣಾ ಪ್ರತಾಪ್‌ ಮಾರ್ಗ’ ಎಂದು ಬರೆದ ಹಾಳೆಯನ್ನು ಅಂಟಿಸಿದ್ದಾರೆ.

ಇದಾದ ಕೆಲವು ಗಂಟೆಗಳಲ್ಲಿ, ಗಸ್ತಿನಲ್ಲಿದ್ದ ಪೊಲೀಸರು ಈ ಹಾಳೆಯನ್ನು ಕಿತ್ತೆಸೆದಿದ್ದಾರೆ. ಈ ಸಂಬಂಧ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ. ಪೊಲೀಸರು ಇದುವರೆಗೆ ಯಾರನ್ನೂ ವಶಕ್ಕೆ ಪಡೆದಿಲ್ಲ.

ಮೊಘಲ್‌ ದೊರೆ ಅಕ್ಬರ್‌ ವಿರುದ್ಧ ಸೆಣಸಿದ ರಾಜಸ್ಥಾನದ ಮೇವಾಡ ರಾಜ ಮಹಾರಾಣಾ ಪ್ರತಾಪ್‌ ಸಿಂಗ್‌ ಜಯಂತಿ ದಿನವಾದ ಬುಧವಾರ ಇದು ಕಾಣಿಸಿಕೊಂಡಿದೆ. ಮಂಗಳವಾರ ರಾತ್ರಿ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ADVERTISEMENT

ಇಂತಹ ಕೃತ್ಯ ಹೊಸದೇನಲ್ಲ. 2016ರಲ್ಲಿ ಮೊದಲ ಬಾರಿಗೆ ಇಂತಹ ಘಟನೆ ನಡೆದಿತ್ತು. ಹಿಂದೂ ಸೇನಾ ಎಂಬ ಬಲಪಂಥೀಯ ಸಂಘಟನೆ ಅದರ ಹೊಣೆ ಹೊತ್ತಿತ್ತು.

ರಸ್ತೆಗಳ ಮರು ನಾಮಕರಣ ಹೊಸದಲ್ಲ: 2015ರಲ್ಲಿ ಔರಂಗಜೇಬ್‌ ಮಾರ್ಗದ ಹೆಸರನ್ನು ‘ಡಾ. ಅಬ್ದುಲ್‌ ಕಲಾಂ ಮಾರ್ಗ’ ಎಂದು ನವದೆಹಲಿ ಮಹಾನಗರಪಾಲಿಕೆ ಬದಲಿಸಿತ್ತು.

ಅದೇ ವರ್ಷ, ಅಕ್ಬರ್‌ ರಸ್ತೆ ಅಥವಾ ಸಂಸತ್‌ ಬಳಿ ಇರುವ ಬೇರೆ ಯಾವುದೇ ರಸ್ತೆಗೆ ‘ಮಹಾರಾಣಾ ಪ್ರತಾಪ್‌ ಮಾರ್ಗ’ ಎಂದು ಮರುನಾಮಕರಣ ಮಾಡುವಂತೆ ಭೂಸೇನೆಯ ನಿವೃತ್ತ ಮುಖ್ಯಸ್ಥ ಹಾಗೂ ಬಿಜೆಪಿ ನಾಯಕ ವಿ.ಕೆ. ಸಿಂಗ್‌ ಅವರು ನಗರಾಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆದಿದ್ದರು.

ಕೇಂದ್ರ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತದೆಯೇ ಹೊರತು ರಸ್ತೆಗಳಿಗೆ ಮರು ನಾಮಕರಣ ಮಾಡುವುದಕ್ಕಲ್ಲ ಎಂದು ಅಂದು ನಗರಾಭಿವೃದ್ಧಿ ಸಚಿವರಾಗಿದ್ದ ಎಂ.ವೆಂಕಯ್ಯ ನಾಯ್ಡು ಸ್ಪಷ್ಟಪಡಿಸಿ
ದ್ದರು.

ಅದರ ಮರುವರ್ಷದಲ್ಲಿಯೇ ಪ್ರಧಾನಿ ನಿವಾಸವಿದ್ದ ರೇಸ್‌ಕೋರ್ಸ್‌ ರಸ್ತೆಗೆ ಲೋಕಕಲ್ಯಾಣ ಮಾರ್ಗ ಎಂದು ಮರು ನಾಮಕರಣ ಮಾಡಲಾಗಿತ್ತು.

‘ನಮ್ಮ ಮೇಲೆ ಆಕ್ರಮಣ ನಡೆಸಿದ ಮೊಘಲ್‌ ದೊರೆಯ ಹೆಸರು ದಾಸ್ಯದ ಸಂಕೇತ. ಬಿಜೆಪಿ ಸರ್ಕಾರ ಈಗಲಾದರೂ ಈ ರಸ್ತೆಗೆ ರಾಣಾ ಪ್ರತಾಪ್‌ ಸಿಂಗ್‌ ಹೆಸರು ಇಡುತ್ತದೆ ಎಂಬ ಭರವಸೆ ಇದೆ’ ಎಂದು ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ಕಳೆದ ವರ್ಷ ತಮ್ಮ ಕೃತ್ಯ ಸಮರ್ಥಿಸಿಕೊಂಡಿದ್ದರು.

ಹೆಸರು ಬದಲಿಸುವ ಪ್ರಸ್ತಾಪ ಇಲ್ಲ
‘ಅಕ್ಬರ್‌ ರಸ್ತೆಯ ಹೆಸರು ಬದಲಿಸುವ ಉದ್ದೇಶ ಅಥವಾ ಪ್ರಸ್ತಾಪ ಪಾಲಿಕೆ ಮುಂದಿಲ್ಲ. ಕಿಡಿಗೇಡಿಗಳ ಈ ಕೃತ್ಯ ಕಾನೂನು, ಸುವ್ಯವಸ್ಥೆಗೆ ಸಂಬಂಧಿಸಿದ್ದು, ಪೊಲೀಸರು ಕ್ರಮ ಕೈಗೊಳ್ಳುತ್ತಾರೆ’ ಎಂದು ನವದೆಹಲಿ ಮಹಾನಗರಪಾಲಿಕೆ (ಎನ್‌ಡಿಎಂಸಿ) ಸ್ಪಷ್ಟಪಡಿಸಿದೆ.

ಗಸ್ತು ಪೊಲೀಸರು ನಾಮಫಲಕದ ಮೇಲೆ ಅಂಟಿಸಿದ್ದ ಹಾಳೆ ಕಿತ್ತು ಎಸೆದಿದ್ದಾರೆ. ಎನ್‌ಡಿಎಂಸಿ ದೂರು ಸಲ್ಲಿಸಿದರೆ ಪ್ರಕರಣ ದಾಖಲಿಸಿಕೊಂಡು ಕಿಡಿಗೇಡಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಸಂಸತ್‌ ಭವನದ ಸಮೀಪದಲ್ಲಿರುವ ಅಕ್ಬರ್‌ ರಸ್ತೆಯಲ್ಲಿ ಕೇಂದ್ರ ಸಚಿವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ನಿವಾಸಗಳಿವೆ. ಕಾಂಗ್ರೆಸ್‌ ಪ್ರಧಾನ ಕಚೇರಿ ಕೂಡ ಇಲ್ಲಿಯೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.