ADVERTISEMENT

ಅಕ್ರಮ ಆಸ್ತಿ : ಜಗನ್ ಆಪ್ತ ಜೈಲಿಗೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಹೈದರಾಬಾದ್ (ಪಿಟಿಐ): ಕಡಪಾ ಸಂಸದ ವೈ.ಎಸ್.ಜಗನ್ಮೋಹನ ರೆಡ್ಡಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಜಗತಿ ಪಬ್ಲಿಕೇಷನ್ಸ್‌ನ ಉಪಾಧ್ಯಕ್ಷ ವಿಜಯ್ ಸಾಯಿ ರೆಡ್ಡಿ ಅವರನ್ನು ಇದೇ 17ರವರೆಗೆ ನ್ಯಾಯಾಂಗ ಬಂಧನದಲ್ಲಿಡಲು ವಿಶೇಷ ನ್ಯಾಯಾಲಯ ಆದೇಶಿಸಿದೆ. 
 
ಆಂಧ್ರ ಪ್ರದೇಶ ಹೈಕೋರ್ಟ್ ಆದೇಶದ ಮೇರೆಗೆ ಕಳೆದ ಆಗಸ್ಟ್ 17ರಂದು ಜಗನ್ಮೋಹನ ರೆಡ್ಡಿ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದ ಸಿಬಿಐ, ವಿಜಯ್ ರೆಡ್ಡಿ ಅವರನ್ನು ಎರಡನೇ ಆರೋಪಿ ಎಂದು ಹೆಸರಿಸಿತ್ತು.

ಸೋಮವಾರ ರಾತ್ರಿ  ಅವರನ್ನು ಬಂಧಿಸಿ ಮಂಗಳವಾರ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ವೇಳೆ, ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸುವಂತೆ ನ್ಯಾಯಾಲಯವನ್ನು ಕೋರಿತು. ಆದರೆ ಇದನ್ನು ರೆಡ್ಡಿ ಪರ ವಕೀಲರು ತೀವ್ರವಾಗಿ ವಿರೋಧಿಸಿದರು. ವಿಜಯ್ ರೆಡ್ಡಿ ಅವರಿಗೆ ಪ್ರಕರಣದ ಸಂಪೂರ್ಣ ಮಾಹಿತಿಯ ಅರಿವಿರುವುದರಿಂದ ಹೆಚ್ಚಿನ ವಿಚಾರಣೆಗಾಗಿ ಅವರನ್ನು ಸಂಸ್ಥೆಯ ವಶಕ್ಕೆ ನೀಡಬೇಕು ಎಂದು ಸಿಬಿಐ ವಕೀಲರು ವಾದಿಸಿದರು.

ಜಗತಿ ಪಬ್ಲಿಕೇಷನ್ಸ್ (ಸಾಕ್ಷಿ ಟಿ.ವಿ ಮತ್ತು ಸಾಕ್ಷಿ ತೆಲುಗು ಪತ್ರಿಕೆ ಇದರಡಿ ಕಾರ್ಯ ನಿರ್ವಹಿಸುತ್ತಿದೆ) ಉಪಾಧ್ಯಕ್ಷರಾಗಿರುವ ರೆಡ್ಡಿ, ಜಗನ್ ಮಾಲೀಕತ್ವದ ಕಂಪೆನಿಗಳ ಹಣಕಾಸು ಸಲಹೆಗಾರರಾಗಿದ್ದರು. ಅದಕ್ಕೂ ಮುನ್ನ ದಿ. ವೈ.ಎಸ್.ರಾಜಶೇಖರ ರೆಡ್ಡಿ ಕುಟುಂಬದ ಆಡಿಟರ್ ಆಗಿಯೂ ಕೆಲಸ ನಿರ್ವಹಿಸಿದ್ದರು.

ಜಗನ್ಮೋಹನ ರೆಡ್ಡಿ ಪ್ರಕರಣದ ತನಿಖೆಯಲ್ಲಿ ಸಿಬಿಐ ತನ್ನ ವ್ಯಾಪ್ತಿ ಮೀರಿ ಹಸ್ತಕ್ಷೇಪ ನಡೆಸುತ್ತಿದೆ ಎಂದು ವಿಜಯ್ ರೆಡ್ಡಿ ಕಳೆದ ತಿಂಗಳು ಆರೋಪಿಸಿದ್ದರಲ್ಲದೆ, ಜಗನ್ ಮಾಲೀಕತ್ವದ ಕಂಪೆನಿಗಳ ಹಣಕಾಸು ವ್ಯವಹಾರದ ದಾಖಲೆಗಳನ್ನು ಪರಿಶೀಲಿಸುವುದರಿಂದ ಸಿಬಿಐ ದೂರ ಸರಿಯಬೇಕೆಂದು ನ್ಯಾಯಾಲಯವನ್ನು ಕೋರಿದ್ದರು. ಆದರೆ ನ್ಯಾಯಾಲಯ ರೆಡ್ಡಿ ಅವರ ಕೋರಿಕೆಯನ್ನು ತಳ್ಳಿಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.