ADVERTISEMENT

ಅಖಿಲೇಶ್ ಯಾದವ್‍ಗೆ 'ಸೈಕಲ್' ಚಿಹ್ನೆ; ಮುಲಾಯಂಗೆ ಮುಖಭಂಗ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 14:26 IST
Last Updated 16 ಜನವರಿ 2017, 14:26 IST
ಅಖಿಲೇಶ್ ಯಾದವ್‍ಗೆ 'ಸೈಕಲ್' ಚಿಹ್ನೆ; ಮುಲಾಯಂಗೆ ಮುಖಭಂಗ
ಅಖಿಲೇಶ್ ಯಾದವ್‍ಗೆ 'ಸೈಕಲ್' ಚಿಹ್ನೆ; ಮುಲಾಯಂಗೆ ಮುಖಭಂಗ   

ಲಖನೌ: ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದ ಎರಡು ಬಣಗಳ ನಡುವೆ ಸೈಕಲ್‌ ಚಿಹ್ನೆಗಾಗಿ ನಡೆದಿರುವ ಸಂಘರ್ಷದ ಬಗ್ಗೆ ಚುನಾವಣಾ ಆಯೋಗ ಸೋಮವಾರ ತೀರ್ಪು ನೀಡಿದ್ದು, ಅಖಿಲೇಶ್ ಯಾದವ್‍ ಬಣಕ್ಕೆ 'ಸೈಕಲ್' ಚಿಹ್ನೆ ಸಿಕ್ಕಿದೆ.

ಎಎನ್‍ಐ ಸುದ್ದಿಸಂಸ್ಥೆಯ ಪ್ರಕಾರ ಅಖಿಲೇಶ್ ಯಾದವ್ ಅವರ ಬಣ ಸೈಕಲ್ ಚಿಹ್ನೆಯನ್ನು ಚುನಾವಣಾ ಚಿಹ್ನೆಯಾಗಿ ಬಳಸಬಹುದು ಎಂದು ಚುನಾವಣಾ ಆಯೋಗ ತೀರ್ಪು ನೀಡಿದೆ.

ಈ ತೀರ್ಪಿನಿಂದಾಗಿ 25 ವರ್ಷಗಳ ಹಿಂದೆ ಪಕ್ಷ ಸ್ಥಾಪನೆ ಮಾಡಿದ್ದ 77ರ ಹರೆಯದ ಮುಲಾಯಂ ಸಿಂಗ್ ಅವರಿಗೆ ಮುಖಭಂಗವಾಗಿದೆ. ಸಮಾಜವಾದಿ ಪಕ್ಷ ಅಖಿಲೇಶ್ ಬಣ ಮತ್ತು ಮುಲಾಯಂ ಬಣ ಎಂದು ಹೋಳಾದ ನಂತರ ಚುನಾವಣಾ ಚಿಹ್ನೆಗಾಗಿ ಅಪ್ಪ ಮತ್ತು ಮಗನ ನಡುವೆ ಹೋರಾಟ ನಡೆದು ಬರುತ್ತಿತ್ತು.

ADVERTISEMENT

ಆದಾಗ್ಯೂ, ಚುನಾವಣಾ ಚಿಹ್ನೆ ಬಗ್ಗೆ ಚುನಾವಣಾ ಆಯೋಗ ಯಾವ ತೀರ್ಪು ನೀಡುತ್ತದೋ, ಈ ತೀರ್ಪನ್ನು ನಾನು ಸ್ವೀಕರಿಸುತ್ತೇನೆ ಎಂದು ಮುಲಾಯಂ ಈ ಹಿಂದೆ ಹೇಳಿಕೆ ನೀಡಿದ್ದರು.

ಅಖಿಲೇಶ್‌ ಬಣವು ಇತ್ತೀಚೆಗೆ ಸಮಾವೇಶ ನಡೆಸಿ ಅದರಲ್ಲಿ ಅಖಿಲೇಶ್‌ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಮುಲಾಯಂ ಅವರನ್ನು ಮಾರ್ಗದರ್ಶಕ ಎಂದು ಘೋಷಿಸಿತ್ತು.

ಅಖಿಲೇಶ್‌ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದೇ ಕಾನೂನು ಬಾಹಿರ. ಯಾಕೆಂದರೆ ಈ ನೇಮಕ ನಡೆದ ಸಭೆ ಕರೆದವರು ರಾಮಗೋಪಾಲ್‌ ಯಾದವ್‌. ಅವರನ್ನು ಅದಕ್ಕೂ ಮೊದಲೇ ಪಕ್ಷದಿಂದ ಉಚ್ಚಾಟಿಸಲಾಗಿತ್ತು ಎಂದು ಮುಲಾಯಂ ಬಣದ ವಾದಿಸಿದ್ದು, ಅಪ್ಪ-ಮಗನ ಬಣದ ನಡುವಿನ ಹೋರಾಟದಲ್ಲಿ ಪಕ್ಷ ಎರಡು ಹೋಳಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.