ADVERTISEMENT

ಅಗ್ನಿ ದುರಂತ: ನಾಲ್ವರ ಸಾವು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 19:59 IST
Last Updated 25 ಏಪ್ರಿಲ್ 2013, 19:59 IST

ಕೊಯಮತ್ತೂರು (ಪಿಟಿಐ): ನಾಲ್ಕು ಮಹಡಿ ಇರುವ ವಾಣಿಜ್ಯ ಸಮುಚ್ಚಯದ ಮೂರನೇ ಮಹಡಿಯ ಖಾಸಗಿ ಬ್ಯಾಂಕ್ ಒಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ನಾಲ್ವರು ಮಹಿಳೆಯರು ಮೃತಪಟ್ಟಿರುವ ಘಟನೆ ಗುರುವಾರ ಬೆಳಿಗ್ಗೆ ಕೊಯಮತ್ತೂರಿನಲ್ಲಿ ನಡೆದಿದೆ.

ಮೃತಪಟ್ಟವರಲ್ಲಿ ಇಬ್ಬರು ಸ್ಟಾಕ್ ಬ್ರೋಕರೇಜ್(ದಳ್ಳಾಳಿ) ಉದ್ಯೋಗಿಗಳು ಹಾಗೂ ಇನ್ನಿಬ್ಬರು ಮನೆ ಕೆಲಸದವರು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಎರಡನೇ ಹಾಗೂ ಮೂರನೇ ಕಟ್ಟಡದಿಂದ ಜಿಗಿದವರೂ ಸೇರಿ ಏಳು ಮಂದಿ ಗಾಯಗೊಂಡಿದ್ದಾರೆ.
ಉಳಿದ 200 ಕ್ಕೂ ಹೆಚ್ಚು ಮಂದಿ ಕಟ್ಟಡದ ಹೊರಗೆ ಓಡಿ ಹೋದರಲ್ಲದೆ, ಕೆಲವರು ಕಟ್ಟಡದಿಂದ ಜಿಗಿದು  ಇಲ್ಲವೇ ಸ್ಥಳೀಯರು ಹಾಗೂ ರಕ್ಷಣಾ ಪಡೆಯವರ ಸಹಾಯದಿಂದ ಪಾರಾಗಿದ್ದಾರೆ.

ಕಟ್ಟಡಕ್ಕೆ ಆವರಿಸಿಕೊಂಡ ಹೊಗೆಯಿಂದ ದಾರಿ ಕಾಣದೆ ನಾಲ್ವರೂ ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡು ಮೃತಪಟ್ಟಿದ್ದಾರೆ ಎಂದು ಅಗ್ನಿ ಶಾಮಕ ದಳದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಕೊಯಮತ್ತೂರಿನ ಅವಿನಶಿ ರಸ್ತೆಯ ವಾಣಿಜ್ಯ ಸಮುಚ್ಚಯದಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ ಕಚೇರಿಯಲ್ಲಿ ಮೊದಲು ಶಾರ್ಟ್ ಸರ್ಕೀಟ್‌ನಿಂದ  ಬೆಂಕಿ ಕಾಣಿಸಿಕೊಂಡು ಇಡೀ ಕಟ್ಟಡಕ್ಕೆ ಆವರಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

9 ಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ವಾಹನಗಳು, ವಾಯು ಪಡೆಯ ಹೆಲಿಕಾಪ್ಟರ್ ಹಾಗೂ ಸಶಸ್ತ್ರ ದಳದವರೂ ಸೇರಿ ಸತತ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ, ಕಟ್ಟಡದಲ್ಲಿ ಸಿಕ್ಕಿಹಾಕಿಕೊಂಡವರನ್ನು ರಕ್ಷಿಸಿದರು. ಹಾಗೂ ಬೆಂಕಿ ನಂದಿಸಿ ಮೃತಪಟ್ಟಿರುವವರ ದೇಹಗಳನ್ನು ಹೊರತೆಗೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.