ADVERTISEMENT

ಅಣು ವಿದ್ಯುತ್ ಘಟಕ ನಿರ್ಮಾಣ ವಿವಾದ: ಕಂದನ್‌ಕೊಳಂಗೆ ಧಾವಿಸಿದ ಸಚಿವ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 19:30 IST
Last Updated 20 ಸೆಪ್ಟೆಂಬರ್ 2011, 19:30 IST

ಚೆನ್ನೈ, (ಪಿಟಿಐ):  ತಮಿಳುನಾಡಿನ ಕಂದನ್‌ಕೊಳಂ ಅಣು ವಿದ್ಯುತ್ ಘಟಕ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಹತ್ತು ದಿನಗಳಿಂದ ಧರಣಿ ಕುಳಿತಿರುವ ಸ್ಥಳೀಯರೊಂದಿಗೆ ಸಂಧಾನ ಮಾತುಕತೆ ನಡೆಸಲು ಪ್ರಧಾನಮಂತ್ರಿ ಕಚೇರಿಯ ರಾಜ್ಯ ಸಚಿವ ವಿ.ನಾರಾಯಣ ಸ್ವಾಮಿ ಮಂಗಳವಾರ ಇಲ್ಲಿಗೆ ಆಗಮಿಸಿದ್ದಾರೆ. 

`ಅಣು ಸ್ಥಾವರ ನಿರ್ಮಾಣಕ್ಕೂ ಮುನ್ನ ಎಲ್ಲ ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಸ್ಥಳೀಯರ ಆತಂಕ ದೂರಮಾಡಿ ಅವರ ಮನವೊಲಿಸುವ ಭರವಸೆ ಇದೆ~ ಎಂದು ಕಂದನ್‌ಕೊಳಂಗೆ ತೆರಳುವ ಮುನ್ನ ಅವರು ಸುದ್ದಿಗಾರರಿಗೆ ತಿಳಿಸಿದರು.

ಜನರ ಭಯ ದೂರವಾಗುವವರೆಗೂ ಉದ್ದೇಶಿತ ಘಟಕದ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸೋಮವಾರ ಪ್ರಧಾನಮಂತ್ರಿಗೆ ಖಾರವಾದ ಪತ್ರ ಬರೆದಿದ್ದರು. 

 ಇದಕ್ಕೆ ತಕ್ಷಣ ಸ್ಪಂದಿಸಿದ ಪ್ರಧಾನಿ, ದೂರವಾಣಿಯಲ್ಲಿ ಜಯಾ ಅವರೊಂದಿಗೆ ಮಾತುಕತೆ ನಡೆಸಿದರು. ಸಮಸ್ಯೆ ಬಗೆಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು. ಅದರ ಫಲವಾಗಿಯೇ ನಾರಾಯಣ ಸ್ವಾಮಿ ಅವರನ್ನು ಪ್ರಧಾನಿ ಮಂಗಳವಾರ ಇಲ್ಲಿಗೆ ಕಳುಹಿಸಿಕೊಟ್ಟಿದ್ದಾರೆ. 

ವಿರೋಧ ದುರದೃಷ್ಟಕರ: ರಷ್ಯ
ನವದೆಹಲಿ ವರದಿ: ಭಾರತ ಮತ್ತು ರಷ್ಯ ಜಂಟಿಯಾಗಿ ಕಂದನ್‌ಕೊಳಂನಲ್ಲಿ ನಿರ್ಮಿಸುತ್ತಿರುವ ಅಣು ವಿದ್ಯುತ್ ಘಟಕ ವಿರೋಧಿಸಿ ಸ್ಥಳೀಯರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ದುರದೃಷ್ಟಕರ ಎಂದು ರಷ್ಯ ಪ್ರತಿಕ್ರಿಯಿಸಿದೆ.

`ಜಪಾನ್ ಫುಕುಶಿಮಾ ಅಣುಸ್ಥಾವರ ದುರಂತವನ್ನು ಗಮನದಲ್ಲಿಟ್ಟುಕೊಂಡು ಇಲ್ಲಿಯ ಸ್ಥಾವರ ನಿರ್ಮಿಸಲಾಗುತ್ತಿದೆ. ಪ್ರಾಕೃತಿಕ ವಿಕೋಪಗಳನ್ನು ತಡೆದುಕೊಳ್ಳುವ ನಿರೋಧಕ ಶಕ್ತಿ ಸ್ಥಾವರಕ್ಕಿದೆ. ಜನರು ಅನಗತ್ಯವಾಗಿ ಆತಂಕಪಡುವ ಅಗತ್ಯವಿಲ್ಲ~ ಎಂದು ಚೆನ್ನೈನಲ್ಲಿರುವ ರಷ್ಯದ ರಾಜತಾಂತ್ರಿಕ ಕಚೇರಿಯ ಹಿರಿಯ ಅಧಿಕಾರಿ ವಿ.ಕರ್ಮಾಲಿಟೊ ಭರವಸೆ ನೀಡಿದ್ದಾರೆ.

ರಹಸ್ಯ ವರದಿ ಸೋರಿಕೆ 
ಚೆನ್ನೈ ವರದಿ:  ರಷ್ಯ ಸಹಯೋಗ ಮತ್ತು ತಂತ್ರಜ್ಞಾನದಲ್ಲಿ ಕಂದನ್‌ಕೊಳಂನಲ್ಲಿ ನಿರ್ಮಿಸುತ್ತಿರುವ ಅಣು ವಿದ್ಯುತ್ ಘಟಕದ ಗುಣಮಟ್ಟ ಮತ್ತು ಪ್ರತಿರೋಧಕ ಶಕ್ತಿಯ ಬಗ್ಗೆ ಸಂದೇಹ ವ್ಯಕ್ತವಾಗಿರುವ ಅತ್ಯಂತ ರಹಸ್ಯ ವರದಿಯನ್ನು ನಾರ್ವೆ ಮೂಲದ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದು ಬಹಿರಂಗಪಡಿಸಿದೆ.

`ದಿ ಬೆಲ್ಲಾನ್ ಪ್ರತಿಷ್ಠಾನ~ ಬಹಿರಂಗಪಡಿಸಿದೆ ಎನ್ನಲಾದ ಗೋಪ್ಯ ವರದಿಯಲ್ಲಿ ಪ್ರಸ್ತಾಪಿಸಿದ ಅಂಶಗಳ ಹಿನ್ನೆಲೆಯಲ್ಲಿಯೇ ಈ ಘಟಕ ನಿರ್ಮಾಣಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.

ಭೂಕಂಪ ಮತ್ತು ಸುನಾಮಿಯಂತಹ ಪ್ರಾಕೃತಿಕ ವಿಕೋಪದ ಸಂದರ್ಭಗಳಲ್ಲಿ ರಷ್ಯ ನಿರ್ಮಿತ ಸ್ಥಾವರಗಳ ಗುಣಮಟ್ಟ ಮತ್ತು ಪ್ರತಿರೋಧಕ ಶಕ್ತಿಯ ಬಗ್ಗೆ ಅಲ್ಲಿಯ ಸರ್ಕಾರದ ವರದಿ ಸಂದೇಹ ವ್ಯಕ್ತಪಡಿಸಿದೆ. ಈ ಸ್ಥಾವರಗಳ ಗುಣಮಟ್ಟ ನಿಗದಿಗಿಂತ ಕೆಳಮಟ್ಟದ್ದಾಗಿದೆ ಎಂಬ ಅಂಶಗಳನ್ನು ವರದಿ ಒಳಗೊಂಡಿದೆ. 
ಆದರೆ, ಭಾರತೀಯ ಅಣುಶಕ್ತಿ ನಿಗಮದ ವಿಜ್ಞಾನಿ ಡಾ. ಸುಧೀಂದ್ರ ಠಾಕೂರ್ ಅವರು ಈ ಆರೋಪಗಳನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ.

ಸ್ವಾಯತ್ತ ಸಂಸ್ಥೆಯಾಗಿರುವ ಅಣುಶಕ್ತಿ ನಿಯಂತ್ರಣ ಮಂಡಳಿ ರಷ್ಯದಿಂದ ಆಮದು ಮಾಡಿಕೊಳ್ಳಲಾದ ಎಲ್ಲ ಯಂತ್ರೋಪಕರಣಗಳ ಗುಣಮಟ್ಟವನ್ನೂ ಪರೀಕ್ಷಿಸಿ ಒಪ್ಪಿಗೆ ನೀಡಿದ ಬಳಿಕವಷ್ಟೇ ಅವುಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಮತ್ತೊಬ್ಬ ಅಣು ವಿಜ್ಞಾನಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.