ADVERTISEMENT

ಅಣ್ಣಾ ಆರೋಪಕ್ಕೆ ಸಂಸದರ ಆಕ್ರೋಶ, ಕಲಾಪ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 10:00 IST
Last Updated 26 ಮಾರ್ಚ್ 2012, 10:00 IST

ನವ ದೆಹಲಿ (ಐಎಎನ್‌ಎಸ್): ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ನಿರಶನ ಆರಂಭಿಸಿರುವ ಅಣ್ಣಾ ತಂಡವು ಭಾನುವಾರ ~165 ಸಂಸದರು ಹಾಗೂ 14 ಕೇಂದ್ರ ಸಚಿವರು ಭ್ರಷ್ಟರು ಹಾಗೂ ಅತ್ಯಾಚಾರಿಗಳು~ ಎಂದು ಮಾಡಿದ ಆರೋಪ ಸೋಮವಾರ ಲೋಕಸಭೆಯಲ್ಲಿ ಪ್ರಸ್ತಾಪಗೊಂಡು ಸಂಸದರ ಆಕ್ರೋಶಕ್ಕೆ ಕಾರಣವಾಯಿತು.

ಪಕ್ಷಭೇದ ಮರೆತು ಎಲ್ಲಾ ಸಂಸದರು ಅಣ್ಣಾ ಹಜಾರೆ ಮಾಡಿದ ಆರೋಪವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಹೀಗಾಗಿ ದಿನದ ಮಟ್ಟಿಗೆ ಲೋಕಸಭೆ ಕಲಾಪ ಮುಂದೂಡಲಾಯಿತು.

ಸೋಮವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಅಣ್ಣಾ ಹಜಾರೆ ಹಾಗೂ ಅವರ ತಂಡದ ಹೇಳಿಕೆ ಕುರಿತು ಬಿಜೆಪಿ ಸಂಸದರು ಪ್ರಸ್ತಾಪ ಮಾಡಿದರು. ಗದ್ದಲದ ಕಾರಣ ಮಧ್ಯಾಹ್ನಕ್ಕೆ ಕಲಾಪವನ್ನು ಮುಂದೂಡಲಾಗಿತ್ತು. ಮತ್ತೆ ಮಧ್ಯಾಹ್ನ 2ಕ್ಕೆ ಕಲಾಪ ಆರಂಭವಾದಾಗ ಬಿಜೆಪಿ ಸಂಸದರಿಗೆ ವಿಷಯದ ಕುರಿತು ಮಾತನಾಡಲು ಸಭಾಧ್ಯಕ್ಷರು ಅನುವು ಮಾಡಿಕೊಟ್ಟರು.

ADVERTISEMENT

`ಅಣ್ಣಾ ಹಜಾರೆ ಅವರು ತಮ್ಮ ಎಲ್ಲೆ ಮೀರಿ ಮಾತನಾಡುತ್ತಿದ್ದಾರೆ. ಸಂಸದರ ಬಗ್ಗೆ ಅಸಂವಿಧಾನಿಕ ಭಾಷೆ ಬಳಸುತ್ತಿರುವ ಅಣ್ಣಾ ಅವರು ತಮ್ಮ ಮಿತಿಯಲ್ಲಿರಬೇಕು~ ಎಂದು ಅಣ್ಣಾ ಹಜಾರೆ ಅವರ ವಿರುದ್ಧ ಲೋಕಸಭಾ ವಿರೋಧ ಪಕ್ಷದ ನಾಯಕಿ ಬಿಜೆಪಿಯ ಸುಶ್ಮಾ ಸ್ವರಾಜ್ ಕಟುವಾಗಿ ಟೀಕಿಸದರು.

`ಅಣ್ಣಾ ತಂಡದ ಹೋರಾಟದ ಹಾದಿ ದಿಕ್ಕು ತಪ್ಪುತ್ತಿದೆ. ಲೋಕಪಾಲದ ಮಸೂದೆ ಅಂಗೀಕಾರಕ್ಕೆ ಸಂಸತ್ತಿನ ಮೇಲೆ ಒತ್ತಡ ಹೇರುತ್ತಿದ್ದಾರೆ. ಏನೇ ಇದ್ದರೂ ಮಸೂದೆ ಅಂಗೀಕಾರ ಸಂಸದರ ನಿರ್ಧಾರದ ಮೇಲೆ ನಿಂತಿದೆ~ ಎಂದು ಸುಶ್ಮಾ ನುಡಿದರು.

ಕಳೆದ ವರ್ಷ ಅಣ್ಣಾ ತಂಡ ಜಂತರ್ ಮಂತರ್‌ನಲ್ಲಿ ಆರಂಭಿಸಿದ್ದ ಭ್ರಷ್ಟಾಚಾರ ವಿರೋಧಿ ಚಳುವಳಿಗೆ ಬೆಂಬಲ ಸೂಚಿಸಿವ ಮೂಲಕ ಧರಣಿ ಕುಳಿತಿದ್ದ ಸಂಸದ ಹಾಗೂ ಜೆಡಿ-ಯು ನಾಯಕ ಶರದ್ ಯಾದವ್ ಅವರು ಪ್ರತಿಕ್ರಿಯಿಸಿ `ಸಂಸತ್ತಿನ ಮೇಲೆ ವಾಗ್ದಾಳಿ ನಡೆಸುತ್ತಿರುವ ಅಣ್ಣಾ ಅವರು ಪ್ರಜಾಪ್ರಭುತ್ವ ವಿರೋಧಿ~ ಎಂದು ದೂರಿದರು.

`ಕಳೆದ ಮೂವತ್ತು ವರ್ಷಗಳಿಂದ ನಾವು ಭ್ರಷ್ಟಾಚಾರ ವಿರೋಧಿಸಿ, ಬಡತನ ಹಾಗೂ ರೈತರ ಪರವಾಗಿ ಹೋರಾಟ ನಡೆಸುತ್ತಾ ಬಂದಿದ್ದೇವೆ. ನಾನು ಅಣ್ಣಾ ಅವರನ್ನು ಬೆಂಬಲಿಸಿದ್ದು ನಿಜ. ಆದರೆ ಅವರ ಎಲ್ಲಾ ಬೇಡಿಕೆಗಳನ್ನು ಒಪ್ಪಲಾಗದು~ ಎಂದು ಶರದ್ ಹೇಳಿದರು.

`ನಾಗರಿಕ ಸಮಾಜ ಕಾರ್ಯಕರ್ತರು ಅನಾಗರಿಕ ಭಾಷೆ ಬಳಸುತ್ತಿದ್ದಾರೆ~ ಎಂದು ಕಾಂಗ್ರೆಸ್ ಸಂಸದ ಸಂಜಯ್ ನಿರುಪಮ್ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.