ADVERTISEMENT

ಅಣ್ಣಾ ತಂಡದ ಕೋರ್ ಕಮಿಟಿ ವಿಸರ್ಜನೆ ಸದ್ಯಕ್ಕಿಲ್ಲ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2011, 19:30 IST
Last Updated 29 ಅಕ್ಟೋಬರ್ 2011, 19:30 IST

ನವದೆಹಲಿ: ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಅಣ್ಣಾ  ತಂಡದ ~ಪ್ರಮುಖರ ಸಮಿತಿ~ಯ (ಕೋರ್ ಕಮಿಟಿ) ವಿಸರ್ಜನೆ ಸದ್ಯಕ್ಕಿಲ್ಲ.  ಸಮಿತಿ ವಿಸರ್ಜಿಸದೆ ಇರಲು ತಂಡದ ಪ್ರಮುಖರು ಶನಿವಾರ ನಿರ್ಧರಿಸಿದರು. ಇದರಿಂದಾಗಿ ಈ ಸಂಬಂಧದ ಎಲ್ಲ ಊಹಾಪೋಹಗಳಿಗೆ  ತೆರೆ ಬಿದ್ದಂತಾಗಿದೆ.

 ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಸಭೆ ಸೇರಿದ್ದ ತಂಡದ ಪ್ರಮುಖರು ನಾಲ್ಕು ಗಂಟೆ ಸುದೀರ್ಘ ಚರ್ಚೆ ನಡೆಸಿದರು. ಅಂತಿಮವಾಗಿ ಸಮಿತಿಯನ್ನು ವಿಸರ್ಜಿಸದೆ ಇರಲು ಸರ್ವಾನುಮತದಿಂದ ತೀರ್ಮಾನಿಸಿದರು.

ಅಣ್ಣಾ ತಂಡದ ಸದಸ್ಯರ ನಡುವಿನ ಬಿಕ್ಕಟ್ಟು ಮತ್ತು ಕೆಲವರ ಮೇಲೆ ಬಂದಿರುವ ಅವ್ಯವಹಾರ ಆರೋಪಗಳ ಹಿನ್ನೆಲೆಯಲ್ಲಿ ಚರ್ಚಿಸಲು ಕರೆಯಲಾಗಿದ್ದ ಮಹತ್ವದ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರು, ಸಮಿತಿ ವಿಸರ್ಜನೆ ಬೇಡವೆಂಬ ಅಭಿಪ್ರಾಯ ತಾಳಿದರು ಎಂದು ಅರವಿಂದ್ ಕೇಜ್ರಿವಾಲ್, ಕಿರಣ್ ಬೇಡಿ ಹಾಗೂ ಪ್ರಶಾಂತ್ ಭೂಷಣ್ ಅನಂತರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಸಮಿತಿ ವಿಸರ್ಜನೆ ಬೇಡಿಕೆ ಮುಂದಿಟ್ಟಿರುವ ಕುಮಾರ್ ವಿಶ್ವಾಸ್, ಇದಕ್ಕೆ ದನಿಗೂಡಿಸಿರುವ ಮೇಧಾ ಪಾಟ್ಕರ್, ನ್ಯಾ. ಸಂತೋಷ್ ಹೆಗ್ಡೆ ಸೇರಿದಂತೆ ಕೆಲವರು ಸಭೆಯಲ್ಲಿ ಭಾಗವಹಿಸಲಿಲ್ಲ. ಹಿಸ್ಸಾರ್ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧದ ಪ್ರಚಾರದಿಂದ ಬೇಸತ್ತು  ರಾಜೇಂದ್ರಸಿಂಗ್ ಮತ್ತು ಪಿ. ವಿ. ರಾಜಗೋಪಾಲ್ ಅಣ್ಣಾ ತಂಡವನ್ನು ತ್ಯಜಿಸಿದ್ದಾರೆ. ಸ್ವಾಮಿ ಅಗ್ನಿವೇಶ್ ಕೂಡಾ ಸಮಿತಿಯಿಂದ  ಮೊದಲೇ ಹೊರ ಹೋಗಿದ್ದಾರೆ.

`ಅಣ್ಣಾ ತಂಡ ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ಹೋರಾಟದ ದಿಕ್ಕು ತಪ್ಪಿಸಲು ಕಾಂಗ್ರೆಸ್ ಅಣ್ಣಾ ತಂಡದ ಸದಸ್ಯರ ವಿರುದ್ಧ ಆರೋಪ ಮಾಡುತ್ತಿದೆ. ಆ ಮೂಲಕ ಚಳವಳಿ ಹತ್ತಿಕ್ಕುವ ಪಿತೂರಿ ನಡೆಸುತ್ತಿದೆ. ಇದಕ್ಕೆ ನಾವು ಜಗ್ಗುವುದಿಲ್ಲ. ಆರೋಪಗಳಿಗೆ ತಕ್ಕ ಉತ್ತರ ಕೊಡುತ್ತೇವೆ. ಈ ಕುತಂತ್ರಗಳು ಕಾಂಗ್ರೆಸ್‌ಗೆ ತಿರುಗು ಬಾಣವಾಗಲಿವೆ. ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ~ ಎಂದು ಅರವಿಂದ್ ಕೇಜ್ರಿವಾಲ್ ಎಚ್ಚರಿಸಿದರು.

~ನಮ್ಮದು ಭ್ರಷ್ಟಾಚಾರ ವಿರೋಧಿ ಚಳವಳಿ. ದೇಶದ ಜನರೇ ಇದರ ಶಕ್ತಿ. ಸಮಿತಿ ನೆಪ ಮಾತ್ರ~ ಎಂದು ಹೇಳಲು ಕೇಜ್ರಿವಾಲ್ ಮರೆಯಲಿಲ್ಲ.

ಕಾಂಗ್ರೆಸ್ ವಿರುದ್ಧ ಹಿಸ್ಸಾರ್‌ನಲ್ಲಿ ಅಣ್ಣಾ ತಂಡ ನಡೆಸಿದ ಪ್ರಚಾರವನ್ನು ಅರವಿಂದ ಕೇಜ್ರಿವಾಲ್ ಮತ್ತು ಪ್ರಶಾಂತ್ ಬಲವಾಗಿ ಸಮರ್ಥಿಸಿಕೊಂಡರು. ಪ್ರಧಾನಿ ಸಿಂಗ್ ಪತ್ರ ಉಪ ಚುನಾವಣೆಗೆ ಮುಂಚೆ ಬಂದಿದ್ದರೆ ಈ ಪ್ರಶ್ನೆ ಉದ್ಭವಿಸುತ್ತಿರಲಿಲ್ಲ. `ಭ್ರಷ್ಟಾಚಾರ ವಿರುದ್ಧದ ಚಳವಳಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಟ್ಟುಕೊಂಡಿಲ್ಲ~ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ ಎಂದರು.

ಹಿಸ್ಸಾರ್ ಉಪ ಚುನಾವಣೆಗೆ ಮುನ್ನ ~ಜನ ಲೋಕಪಾಲ್ ಮಸೂದೆ~ ಬಗ್ಗೆ ನಿಲುವು ವ್ಯಕ್ತಪಡಿಸುವಂತೆ ರಾಜಕೀಯ ಪಕ್ಷಗಳು  ಮತ್ತು ಅವುಗಳ ಅಭ್ಯರ್ಥಿಗಳಿಗೆ ಕೇಳಲಾಗಿತ್ತು. ಕಾಂಗ್ರೆಸ್ ಹೊರತುಪಡಿಸಿ ಉಳಿದೆಲ್ಲ ಪಕ್ಷಗಳು ತಮ್ಮ ನಿಲುವು ವ್ಯಕ್ತಪಡಿಸಿ ಪತ್ರಕೊಟ್ಟವು. ಅಲ್ಲದೆ, ಜನ ಲೋಕಪಾಲ ಮಸೂದೆ ಜಾರಿ ಅಂತಿಮವಾಗಿ ಕಾಂಗ್ರೆಸ್ ಹೊಣೆ ಆಗಿರುವುದರಿಂದ ಎಚ್ಚರಿಕೆ ಕೊಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಯಿತು ಎಂದು ಪ್ರಶಾಂತ್ ಭೂಷಣ್ ತಿಳಿಸಿದರು.

`ಅಣ್ಣಾ ತಂಡದ ಪ್ರಮುಖರ ಸಮಿತಿ ಪುನರ‌್ರಚಿಸಿ ಬಲಪಡಿಸುವುದಕ್ಕೆ ಯಾವಾಗಲೂ ಅವಕಾಶ ಇದ್ದೇ ಇದೆ~ ಎಂದು ಪ್ರಶಾಂತ್ ಇದೇ ವೇಳೆ ಸ್ಪಷ್ಟಪಡಿಸಿದರು. ನವೆಂಬರ್‌ನಲ್ಲಿ ಆರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಲೋಕಪಾಲ ಮಸೂದೆ ಅಂಗೀಕರಿಸಬೇಕು. ಇಲ್ಲದಿದ್ದರೆ ಸದ್ಯದಲ್ಲೇ ಐದು ರಾಜ್ಯಗಳ ವಿಧಾನಸಭೆಗಳಿಗೆ ನಡೆಯುವ ಚುನಾವಣೆಯಲ್ಲೂ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡಲಾಗುವುದು ಎಂದು ಅರವಿಂದ್ ಕೇಜ್ರಿವಾಲ್ ಎಚ್ಚರಿಕೆ ನೀಡಿದರು.

ಕಿರಣ್ ಬೇಡಿ  ಮತ್ತು ತಮ್ಮ ವಿರುದ್ಧ ಬಂದಿರುವ ಆರೋಪವನ್ನು ಪ್ರಮುಖರ ಸಮಿತಿ ತಿರಸ್ಕರಿಸಿತು. ಚಳವಳಿಗೆ ಬಂದ ನೆರವನ್ನು ದುರುಪಯೋಗ ಮಾಡಲಾಗಿದೆ ಎಂಬ ತಮ್ಮ ಮೇಲಿನ ಆರೋಪವನ್ನು ಪ್ರಮುಖರ ಸಮಿತಿ ಒಪ್ಪಲಿಲ್ಲ. ಅಣ್ಣಾ ಅವರ ಅನುಮತಿ ಪಡೆದೇ ಹಣವನ್ನು ತಮ್ಮ ಒಡೆತನದ ಎನ್‌ಜಿಒ ಖಾತೆಗೆ ವರ್ಗಾಯಿಸಲಾಗಿದೆ. ಚಳವಳಿಗೆ ಬಂದಿರುವ ನೆರವು, ಆಗಿರುವ ಖರ್ಚು ಎಲ್ಲ ವಿವರಗಳು ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ಅರವಿಂದ್ ನುಡಿದರು.

ಕಿರಣ್ ಬೇಡಿ ಕೆಲ ಕಾರ್ಯಕ್ರಮಗಳಿಗೆ ವಿಮಾನದ ಸಾಮಾನ್ಯ ವರ್ಗದಲ್ಲಿ ಪ್ರಯಾಣಿಸಿ ಸಂಘಟಿಕರಿಂದ ಹೆಚ್ಚಿನ ಹಣ ಪಡೆದಿದ್ದಾರೆ ಎಂಬ ಆರೋಪ ಅವರಿಬ್ಬರಿಗೆ ಸಂಬಂಧಪಟ್ಟ ವಿಷಯ ಎಂದು ಕೇಜ್ರಿವಾಲ್ ತಳ್ಳಿ ಹಾಕಿದರು.
ರಾಜೇಂದ್ರ ಸಿಂಗ್, ರಾಜಗೋಪಾಲ್ ರಾಜೀನಾಮೆ ಮತ್ತು  ಕುಮಾರ್ ವಿಶ್ವಾಸ್ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಕೇಜ್ರಿವಾಲ್, ಇವರೆಲ್ಲರೂ ಮಾಧ್ಯಮಗಳಿಗೆ ಹೋಗದೆ ಸಭೆಯಲ್ಲಿ ಭಾಗವಹಿಸಿ ಭಿನ್ನಾಭಿಪ್ರಾಯ ದಾಖಲಿಸಬಹುದಿತ್ತು ಎಂದು ಸ್ಪಷ್ಟಪಡಿಸಿದರು. ಇಂದಿನ ಸಭೆಯ ವಿವರಗಳನ್ನು ನೀಡಲು ಕೇಜ್ರಿವಾಲ್ ಮತ್ತು ಪ್ರಶಾಂತ್ ಭೂಷಣ್ ರಾಲೇಗಣ ಸಿದ್ಧಿಯಲ್ಲಿ ಅಣ್ಣಾ ಅವರನ್ನು ಭೇಟಿ ಮಾಡಲಿದ್ದಾರೆ. ಅಣ್ಣಾ ತಂಡದ ಹಿರಿಯ ಸದಸ್ಯ ಶಾಂತಿ ಭೂಷಣ್ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.