ADVERTISEMENT

ಅತ್ಯಾಚಾರದ ಘಟನೆ ವಿವರಿಸಲು ಒತ್ತಡ!

ಆರ್‌ಜೆಡಿ ಮುಖಂಡರ ವಿರುದ್ಧ ಎಫ್‌ಐಆರ್‌ ದಾಖಲು

ಪಿಟಿಐ
Published 16 ಜೂನ್ 2018, 19:11 IST
Last Updated 16 ಜೂನ್ 2018, 19:11 IST
ಅತ್ಯಾಚಾರದ ಘಟನೆ ವಿವರಿಸಲು ಒತ್ತಡ!
ಅತ್ಯಾಚಾರದ ಘಟನೆ ವಿವರಿಸಲು ಒತ್ತಡ!   

ಗಯಾ: ತನ್ನ ಮೇಲಿನ ಸಾಮೂಹಿಕ ಅತ್ಯಾಚಾರದ ಘಟನೆಯನ್ನು ವಿವರಿಸುವಂತೆ ಬಾಲಕಿಯನ್ನು ಒತ್ತಾಯಪಡಿಸಿದ ಆರೋಪದ ಮೇಲೆ, ಆರ್‌ಜೆಡಿ ಪ್ರಧಾನ ಕಾರ್ಯದರ್ಶಿ ಅಲೋಕ್‌ ಕುಮಾರ್‌ ಮೆಹ್ತಾ, ಶಾಸಕ ಸುರೇಂದ್ರ ಯಾದವ್‌ ಸೇರಿದಂತೆ ಪಕ್ಷದ ಹಲವು ಮುಖಂಡರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

‘ಪೊಲೀಸರು ಬಾಲಕಿಯನ್ನು ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಆರ್‌ಜೆಡಿ ಪಕ್ಷದ ಸತ್ಯಶೋಧನಾ ತಂಡ ಎದುರಾಯಿತು. ತನಗಾದ ಅನುಭವವನ್ನು ವಿವರಿಸುವಂತೆ ಬಾಲಕಿಯನ್ನು ತಂಡ ಒತ್ತಾಯಿಸಿತಲ್ಲದೆ, ಕೆಲವರು ಮೊಬೈಲ್‌ ಫೋನಿನಿಂದ ಆಕೆಯೊಂದಿಗೆ ಫೋಟೊ ತೆಗೆದುಕೊಂಡರು, ವಿಡಿಯೊ ಚಿತ್ರೀಕರಿಸಿಕೊಂಡರು. ಈ ಮೂಲಕ ಅವರು ಬಾಲಕಿಯ ಗುರುತನ್ನು ಸಾರ್ವಜನಿಕಗೊಳಿಸಿದರು’ ಎಂದು ಮಗಧ ವಲಯದ ಉಪ ಪೊಲೀಸ್‌ ಮಹಾನಿರೀಕ್ಷಕ ವಿನಯ್‌ಕುಮಾರ್‌ ತಿಳಿಸಿದ್ದಾರೆ.

ಗಯಾ ಜಿಲ್ಲೆಯ ಹಳ್ಳಿಯೊಂದರ ಸಮೀಪ ತಂದೆ ತಾಯಿ 15 ವರ್ಷದ ಮಗಳೊಂದಿಗೆ ಮೋಟಾರ್‌ ಸೈಕಲ್‌ನಲ್ಲಿ ಹೋಗುತ್ತಿದ್ದಾಗ, ಶಸ್ತ್ರಸಜ್ಜಿತ ಯುವಕರ ಗುಂಪು ಅವರನ್ನು ಅಡ್ಡಗಟ್ಟಿತ್ತು. ತಂದೆಯನ್ನು ಮರಕ್ಕೆ ಕಟ್ಟಿಹಾಕಿ, ತಾಯಿ ಮಗಳ ಮೇಲೆ ಅತ್ಯಾಚಾರ ನಡೆಸಿತ್ತು.

ADVERTISEMENT

‘ಪ್ರಕರಣದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಮತ್ತು ಅಪರಾಧಿಗಳನ್ನು ರಕ್ಷಿಸುವ ಸಲುವಾಗಿ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ’ ಎಂದು ಮೆಹ್ತಾ ಪ್ರತಿಕ್ರಿಯಿಸಿದ್ದಾರೆ.

‘ವಾಹನದಿಂದ ಇಳಿಯುವಂತೆ ಬಾಲಕಿಯನ್ನು ನಾವು ಒತ್ತಾಯಿಸಲಿಲ್ಲ. ಘಟನೆಗೆ ಸಂಬಂಧಿಸಿದ ಮಾಹಿತಿ ನೀಡುವಂತೆ ಮನವಿ ಮಾಡಿದೆವು. ಆದರೆ, ಮಾಧ್ಯಮದವರನ್ನು ನೋಡುತ್ತಲೇ ಆಕೆ ಕೋಪಗೊಂಡಳು. ಅತ್ಯಾಚಾರ ನಡೆದ 24 ಗಂಟೆಯೊಳಗೆ ಬಾಲಕಿಗೆ ವ್ಯದ್ಯಕೀಯ ತಪಾಸಣೆ ಮಾಡಿಸಬೇಕಿತ್ತು. ಆದರೆ, 38 ಗಂಟೆಗಳ ನಂತರ ಆಸ್ಪತ್ರೆಗೆ ಕರೆತಂದದ್ದು ಏಕೆ’ ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.