ADVERTISEMENT

ಅತ್ಯಾಚಾರ ಪ್ರಕರಣ: ಮಹಿಳಾ ಆಯೋಗ ಭೇಟಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST

ಭುವನೇಶ್ವರ(ಐಎಎನ್‌ಎಸ್): ಕಳೆದ ನವೆಂಬರ್‌ನಲ್ಲಿ ಪುರಿ ಜಿಲ್ಲೆಯಲ್ಲಿ 19 ವರ್ಷದ ಯುವತಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ  ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗೆ ನಡೆಸಲು ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಸಿಡಬ್ಲ್ಯು)ದ ಅಧಿಕಾರಿಗಳು ಗುರುವಾರ ಒಡಿಶಾಕ್ಕೆ ಆಗಮಿಸಿದ್ದಾರೆ.

ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿರುವ ಎನ್‌ಸಿಡಬ್ಲ್ಯು ಕಾರ್ಯದರ್ಶಿ ಅನಿತಾ ಅಗ್ನಿಹೋತ್ರಿ, ಶ್ರೀರಾಮಚಂದ್ರ ಭಾಂಜಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಅತ್ಯಾಚಾರಕ್ಕೊಳಗಾದ ಮಹಿಳೆ  ಕುಟುಂಬದವರನ್ನು ಭೇಟಿ ಮಾಡಿದ್ದಾರೆ.

`ನಾನು ಆಕೆಯ ತಂದೆ ಹಾಗೂ ಸಂಬಂಧಿಕರನ್ನು ಭೇಟಿ ಮಾಡಿದ್ದೇನೆ. ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಸದ್ಯದಲ್ಲೇ ಆಯೋಗಕ್ಕೆ ಸಲ್ಲಿಸುತ್ತೇನೆ~ ಎಂದು ವರದಿಗಾರರಿಗೆ ತಿಳಿಸಿದ್ದಾರೆ.

ADVERTISEMENT

ದುಷ್ಕೃತ್ಯಕ್ಕೆ ತುತ್ತಾದ ಮಹಿಳೆ ಸದ್ಯ ಕೋಮಾ ಸ್ಥಿತಿಯಲ್ಲಿದ್ದಾಳೆ. 2008 ರಲ್ಲಿ ಅವಳ ಮೇಲೆ ಅತ್ಯಾಚಾರ ನಡೆದಿತ್ತು. ಅದನ್ನು ವಿರೋಧಿಸಿ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ ದ್ವೇಷದ ಮೇಲೆ ಅದೇ ದುಷ್ಕರ್ಮಿಗಳು ಮತ್ತೊಮ್ಮೆ ಅತ್ಯಾಚಾರ ಮಾಡಿದ್ದಾರೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ.

ಮಹಿಳೆಗೆ ಅಗತ್ಯ ಚಿಕಿತ್ಸೆ ನೀಡಲು ಆಸ್ಪತ್ರೆಯವರು ವಿರೋಧಿಸುತ್ತಿರುವದನ್ನು ಮಾಧ್ಯಮಗಳು ವರದಿ ಮಾಡಿದ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು.

ಅತ್ಯಾಚಾರ ಎಸಗಿದವರು ತಪ್ಪಿಸಿಕೊಳ್ಳಲು ಕೃಷಿ ಸಚಿವ ಪ್ರದೀಪ್ ಮಹಾರಥಿ ಸಹಕರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ನೈತಿಕ ಹೊಣೆ ಹೊತ್ತು ಪ್ರದೀಪ್ ಜನವರಿಯಲ್ಲಿ ರಾಜೀನಾಮೆ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ಕು  ಜನರನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.