ADVERTISEMENT

ಅತ್ಯಾಧುನಿಕ, ಅತಿ ಹಗುರ ಫಿರಂಗಿ ಕೆಲಸಕ್ಕೆ ಸಿದ್ಧ

30 ವರ್ಷಗಳ ನಂತರ ಭಾರತದ ಬತ್ತಳಿಕೆಗೆ ಹೊಸ ಅಸ್ತ್ರ

​ಪ್ರಜಾವಾಣಿ ವಾರ್ತೆ
Published 18 ಮೇ 2017, 19:27 IST
Last Updated 18 ಮೇ 2017, 19:27 IST
ಅತ್ಯಾಧುನಿಕ, ಅತಿ ಹಗುರ ಫಿರಂಗಿ ಕೆಲಸಕ್ಕೆ ಸಿದ್ಧ
ಅತ್ಯಾಧುನಿಕ, ಅತಿ ಹಗುರ ಫಿರಂಗಿ ಕೆಲಸಕ್ಕೆ ಸಿದ್ಧ   

ನವದೆಹಲಿ: ಸುಮಾರು 30 ವರ್ಷಗಳ ನಂತರ ಭಾರತೀಯ ಸೇನೆಗೆ ಹೊಸ ಫಿರಂಗಿಗಳು ಸೇರ್ಪಡೆಯಾಗಿವೆ.

ಎರಡು ಅತ್ಯಾಧುನಿಕ ಎಂ777 ಫಿರಂಗಿಗಳು ಅಮೆರಿಕದಿಂದ ವಿಮಾನದ ಮೂಲಕ ಗುರುವಾರ ನವದೆಹಲಿಗೆ ಬಂದಿಳಿದಿವೆ. ಅವನ್ನು ಟ್ರಕ್‌ಗಳ ಮೂಲಕ ರಾಜಸ್ತಾನದ ಪೋಖ್ರಾನ್‌ಗೆ ಸಾಗಿಸಲಾಗಿದೆ. ಪೋಖ್ರಾನ್‌ನಲ್ಲಿ ಸೇನೆಯು ದಾಳಿ ವ್ಯಾಪ್ತಿ ವೇದಿಕೆ (ರೇಂಜ್‌ ಟೇಬಲ್) ರೂಪಿಸಲು ಈ ಎರಡು ಫಿರಂಗಿಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇಂತಹ ಒಟ್ಟು 145 ಫಿರಂಗಿಗಳ ಖರೀದಿಗೆ 2016ರ ಡಿಸೆಂಬರ್‌ನಲ್ಲಿ ಅಮೆರಿಕದ ಜತೆ ಭಾರತ ಒಪ್ಪಂದ ಮಾಡಿಕೊಂಡಿತ್ತು. 1980ರ ದಶಕದ ಭೋಫೋರ್ಸ್ ಫಿರಂಗಿಗಳ ನಂತರ ಭಾರತ ಯಾವುದೇ ಫಿರಂಗಿಗಳನ್ನು ಖರೀದಿಸಿರಲಿಲ್ಲ. ಭೋಫೊರ್ಸ್‌ನಿಂದ ಪರವಾನಗಿ ಪಡೆದು, ಅಭಿವೃದ್ಧಿಪಡಿಸಿರುವ ಧನುಷ್ ಫಿರಂಗಿಗಳು ಇನ್ನೂ ಸೇವೆಗೆ ಲಭ್ಯವಿಲ್ಲ.

ಟೈಟಾನಿಯಂ ಬಳಕೆ
ಈ ಫಿರಂಗಿಯ ಬಹುತೇಕ ಎಲ್ಲಾ ಭಾಗಗಳನ್ನು ಟೈಟಾನಿಯಂ ಲೋಹ ಬಳಸಿ ನಿರ್ಮಿಸಲಾಗಿದೆ. ಟೈಟಾನಿಯಂ ಅತ್ಯಂತ ಹಗುರವಾದ ಮತ್ತು ಸದೃಢವಾದ ಲೋಹ. ಅತಿ ಉಷ್ಣತೆಯ ಪರಿಸ್ಥಿತಿಯಲ್ಲೂ ಈ ಲೋಹಕ್ಕೆ ಯಾವುದೇ ಹಾನಿಯಾಗುವುದಿಲ್ಲ.

ADVERTISEMENT

ಈ ಲೋಹವನ್ನು ಬಳಸಿರುವುದರಿಂದಲೇ ಎಂ777 ಅತ್ಯಂತ ಹಗುರ ಫಿರಂಗಿಗಳೆನಿಸಿವೆ. ಈ ಲೋಹದ ಬೆಲೆ ತೀರಾ ದುಬಾರಿ ಯಾಗಿರುವುದರಿಂದ ಫಿರಂಗಿಗಳ ಬೆಲೆಯೂ ದುಬಾರಿ.

ಹೆಗ್ಗಳಿಕೆಗಳು
* 155 ಎಂಎಂ ಗಾತ್ರದ ಅತ್ಯಾಧುನಿಕ ಫಿರಂಗಿ
* ತನ್ನ ವರ್ಗದ ಎಲ್ಲಾ ಫಿರಂಗಿಗಳಿಗಿಂತ ಅರ್ಧದಷ್ಟು ಕಡಿಮೆ ತೂಕ
* ಹಗುರವಾದ ಫಿರಂಗಿಯಾದ್ದರಿಂದ ಪರ್ವತ ಪ್ರದೇಶಗಳಿಗೂ ಸಾಗಿಸಬಹುದು
* ಬಿಡಿಭಾಗಗಳಾಗಿ ಬಿಡಿಸಿಟ್ಟು, ನಂತರ ಸುಲಭವಾಗಿ ಜೋಡಿಸಿಡುವ ಸವಲತ್ತು ಇದೆ. ಹೀಗಾಗಿ ದೇಶದ ಯಾವುದೇ ಭಾಗಕ್ಕೂ ಸುಲಭವಾಗಿ ಸಾಗಿಸಬಹುದು
* ಸಣ್ಣ ಟ್ರಕ್‌ಗಳನ್ನು ಬಳಸಿ ಎಳೆದುಕೊಂಡು ಹೋಗಬಹುದು

₹ 4,700ಕೋಟಿ ಖರೀದಿ ಒಪ್ಪಂದದ ಮೊತ್ತ

25 ಅಮೆರಿಕದ ಬಿಎಇ ಸಿಸ್ಟಂ ಪೂರೈಸಲಿರುವ ಫಿರಂಗಿಗಳ ಸಂಖ್ಯೆ

2 ವರ್ಷದಲ್ಲಿ ಪೂರೈಕೆ

140 ಮಹೀಂದ್ರಾ–ಬಿಎಇ ಸಹಭಾಗಿತ್ವದ ಫರೀದಾಬಾದ್‌ ಕಾರ್ಖಾನೆಯಲ್ಲಿ ತಯಾರಾಗಲಿರುವ ಫಿರಂಗಿಗಳ ಸಂಖ್ಯೆ

54 ತಿಂಗಳಲ್ಲಿ ಪೂರೈಕೆ

155 ಎಂ.ಎಂ
ಫಿರಂಗಿ ಗುಂಡುಗಳ ಸುತ್ತಳತೆ

5 ಸುತ್ತು (ಪ್ರತಿನಿಮಿಷ)
ದಾಳಿ ಸಾಮರ್ಥ್ಯ

30 ಕಿ.ಮೀ
ದಾಳಿ ವ್ಯಾಪ್ತಿ

4.2 ಟನ್
ಫಿರಂಗಿ ತೂಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.