ADVERTISEMENT

ಅದಿರು ಉತ್ಪಾದನೆ ಮಿತಿ: ತೀರ್ಪು ಕಾದಿರಿಸಿದ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 19:30 IST
Last Updated 11 ಅಕ್ಟೋಬರ್ 2017, 19:30 IST

ನವದೆಹಲಿ: ರಾಜ್ಯದ ಗಣಿಗಳಿಂದ ಅದಿರು ಹೊರ ತೆಗೆಯುವುದರ ಮೇಲಿನ ಮಿತಿಯನ್ನು ಸಡಿಲಗೊಳಿಸಬೇಕೆಂಬ ರಾಜ್ಯ ಸರ್ಕಾರದ ಬೇಡಿಕೆಯನ್ನು ವಿರೋಧಿಸಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆಯನ್ನು ಬುಧವಾರ ಪೂರ್ಣಗೊಳಿಸಿದ ಸುಪ್ರೀಂ ಕೋರ್ಟ್‌, ಈ ಕುರಿತ ತೀರ್ಪುನ್ನು ಕಾದಿರಿಸಿತು.

ಸುಪ್ರೀಂ ಕೋರ್ಟ್‌ನ ಅನುಮೋದಿತ ಮಾರ್ಗದರ್ಶಿ ಸೂತ್ರಗಳಿಗೆ ಅನುಸಾರವಾಗಿ, ವಾರ್ಷಿಕ ಅದಿರು ಉತ್ಪಾದನೆಯ ಮೇಲಿನ ಮಿತಿ ಎಷ್ಟಿರಬೇಕು ಎಂಬುದನ್ನು ತಜ್ಞರ ಸಮಿತಿಯ ಸಲಹೆ ಪಡೆದು ಕೇಂದ್ರ ಸರ್ಕಾರವೇ ನಿರ್ಧಾರ ಕೈಗೊಳ್ಳಲು ಅವಕಾಶ ನೀಡುವಂತೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಮಣಿಂದರ್‌ ಸಿಂಗ್ ವಿಚಾರಣೆಯ ವೇಳೆ ಮನವಿ ಮಾಡಿದರು.

ಅದಿರು ಉತ್ಪಾದನಾ ಮಿತಿಯನ್ನು ನಿರ್ಧರಿಸುವ ಸಾಂಸ್ಥಿಕ ವ್ಯವಸ್ಥೆಯನ್ನು ಕೇಂದ್ರವು ಇದುವರೆಗೆ ಜಾರಿಗೊಳಿಸದ್ದರಿಂದ, ಈ ಹಂತದಲ್ಲಿ ಮನವಿಯನ್ನು ಪರಿಗಣಿಸುವುದಿಲ್ಲ ಎಂದು ತಿಳಿಸಿದ ನ್ಯಾಯಮೂರ್ತಿ ರಂಜನ್‌ ಗೋಗೊಯ್‌ ನೇತೃತ್ವದ ತ್ರಿಸದಸ್ಯ ಪೀಠವು, ಈ ಕುರಿತು ಪ್ರತ್ಯೇಕ ವಿಚಾರಣೆ ನಡೆಸಲು ಸಮ್ಮತಿ ಸೂಚಿಸಿತು.

ADVERTISEMENT

ಅದಿರು ಉತ್ಪಾದನೆಯ ಮಿತಿಗೆ ಸಂಬಂಧಿಸಿದಂತೆ ಕೇಂದ್ರದ ಗಣಿ ಮತ್ತು ಭೂವಿಜ್ಞಾನ ಸಚಿವಾಲಯ ಹಾಗೂ ಉಕ್ಕು ಸಚಿವಾಲಯಗಳು ಪರಸ್ಪರ ವ್ಯತಿರಿಕ್ತ ನಿಲುವು ವ್ಯಕ್ತಪಡಿಸಿದ್ದನ್ನು ತರಾಟೆಗೆ ತೆಗೆದುಕೊಂಡಿದ್ದ ಪೀಠವು, ಏಕರೂಪದ, ನಿಖರವಾದ ನಿಲುವನ್ನು ಸ್ಪಷ್ಟಪಡಿಸುವಂತೆ ಕಳೆದ ವಾರ ನಿರ್ದೇಶನ ನೀಡಿತ್ತು.

ಗಣಿಗಾರಿಕೆಗೆ ಸಂಬಂಧಿಸಿದ ಕಾಯ್ದೆಗೆ 2015ರಲ್ಲಿ ತಿದ್ದುಪಡಿ ತಂದ ನಂತರ ನಿಯಂತ್ರಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿದೆ. ಹಾಗಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಲುವನ್ನೇ ಪ್ರಧಾನವಾಗಿ ಪರಿಗಣಿಸುವಂತೆ ಕೇಂದ್ರದ ಪರ ವಕೀಲರು ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿದ್ದಾರೆ.

‘ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಗಣಿಗಳಲ್ಲಿ ವಾರ್ಷಿಕ ಅದಿರು ಉತ್ಪಾದನೆಯ ಮಿತಿಯನ್ನು 3ರಿಂದ 3.50 ಕೋಟಿ ಮೆಟ್ರಿಕ್‌ ಟನ್‌ಗೆ ಹೆಚ್ಚಿಸಬಹುದು ಎಂಬ ಕೇಂದ್ರದ ಉನ್ನತಾಧಿಕಾರ ಸಮಿತಿಯ ಶಿಫಾರಸು ಸಮಗ್ರ ಅಧ್ಯಯನದ ಆಧಾರದ್ದಾಗಿದೆ’ ಎಂದು ಕೇಂದ್ರ ಸರ್ಕಾರ ಕೋರ್ಟ್‌ಗೆ ತಿಳಿಸಿದೆ.

ಈ ಮಿತಿಯನ್ನು 4 ಕೋಟಿ ಮೆಟ್ರಿಕ್‌ ಟನ್‌ಗೆ ಹೆಚ್ಚಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.