ADVERTISEMENT

`ಅಧಿಕಾರ ದಾಹ'ದ ಕೇಜ್ರಿವಾಲ್ ಪಕ್ಷಕ್ಕೆ ಮತ ನೀಡಲಾರೆ - ಅಣ್ಣಾ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 9:14 IST
Last Updated 6 ಡಿಸೆಂಬರ್ 2012, 9:14 IST
ಅಣ್ಣಾ ಹಜಾರೆ ಅವರೊಂದಿಗೆ ಅರವಿಂದ್ ಕೇಜ್ರಿವಾಲ್
ಅಣ್ಣಾ ಹಜಾರೆ ಅವರೊಂದಿಗೆ ಅರವಿಂದ್ ಕೇಜ್ರಿವಾಲ್   

ನವದೆಹಲಿ (ಪಿಟಿಐ): ಇತ್ತೀಚಿಗಷ್ಟೇ ಅರವಿಂದ್ ಕೇಜ್ರಿವಾಲ್ ಅವರ `ಆಮ್ ಆದ್ಮಿ ಪಕ್ಷ'ದ (ಎಎಪಿ) ಅಭ್ಯರ್ಥಿಗಳಿಗೆ ಮಾತ್ರ ಮತ ನೀಡುವುದಾಗಿ ಹೇಳಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಗುರುವಾರ ಅಧಿಕಾರದ ಆಕರ್ಷಣೆಗೆ ಒಳಗಾಗಿ ಭ್ರಷ್ಟಾಚಾರ ವಿರೋಧಿ ಚಳುವಳಿ ಇಬ್ಭಾಗ ಮಾಡಿದ ಕೇಜ್ರಿವಾಲ್ ಅವರ ಪಕ್ಷಕ್ಕೆ ಮತ ನೀಡುವುದಿಲ್ಲ ಎಂಬ ಭಿನ್ನ ಹೇಳಿಕೆ ನೀಡಿದರು.

ಆಜ್ ತಕ್ ಸುದ್ದಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಣ್ಣಾ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ `ಇತರರಂತೆ `ದುಡ್ಡಿನ ಮೂಲಕ ಅಧಿಕಾರ' ಹಿಡಿಯುವ ದಾರಿ ತುಳಿದಿರುವ ಕೇಜ್ರಿವಾಲ್ ಅವರ ಪಕ್ಷದ ಅಭ್ಯರ್ಥಿಗಳಿಗೆ ತಾವು ಮತ ನೀಡುವುದಿಲ್ಲ' ಎಂದು ತಿಳಿಸಿದರು.

ಆತುರದಿಂದ ಅಧಿಕಾರಕ್ಕೆರಲು ಹವಣಿಸುತ್ತಿರುವ ಕೇಜ್ರಿವಾಲ್ ಅವರ ನಡೆ ಹಿಂದೊಮ್ಮೆ ನನಗೆ ಸರಿ ಎನಿಸಿತ್ತು. ಆದರೆ, ಇಂದು `ಹಣದ ಮೂಲಕ ಅಧಿಕಾರ, ಅಧಿಕಾರದ ಮೂಲಕ ಹಣ' ಎಂಬ ಮಾರ್ಗದೆಡೆ ಅವರು ಹೋಗುತ್ತಿರುವುದನ್ನು ಕಂಡು ಎಎಪಿಗೆ ಮತ ಚಲಾಯಿಸಲು ಕಷ್ಟವೆನಿಸುತ್ತಿದ್ದು, ನಾನು ಅವರ ಹತ್ತಿರಕ್ಕೂ ಸುಳಿಯಲಾರೆ ಎಂದು ಹೇಳಿದರು.

ಈ ಮೊದಲು ಎಎಪಿಯ ಅಭ್ಯರ್ಥಿಗಳಿಗೆ ಮಾತ್ರ ಮತ ನೀಡುವುದಾಗಿ ಹೇಳಿ ಈಗ ಭಿನ್ನ ಹೇಳಿಕೆ ನೀಡುವುದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಅವರು `ನೀಜ, ಈ ಮೊದಲು ನಾನು ಅರವಿಂದ್ ಸ್ವಾರ್ಥ ರಹಿತ ಸೇವೆ ಸಲ್ಲಿಸುತ್ತಿದ್ದಾರೆ ಎಂದೇ ತಿಳಿದಿದೆ. ಆದರೆ ಈ ಮಾರ್ಗದ ಮೂಲಕ ಅವರು ರಾಜಕೀಯ ಮಾಡುತ್ತಾರೆ ಎಂದು ಅರ್ಥಮಾಡಿಕೊಂಡಿರಲಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.