ADVERTISEMENT

ಅಧಿವೇಶನ 2 ವಾರ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ): ಈ ತಿಂಗಳ 5­ರಿಂದ (ಗುರುವಾರ) 20ರವರೆಗೆ ನಡೆ­ಸಲು ನಿಗದಿಯಾಗಿದ್ದ ಸಂಸತ್‌ನ ಚಳಿ­ಗಾಲದ ಅಧಿವೇಶನವನ್ನು ಒಂದು ವಾರ ಬಿಡುವಿನ ನಂತರ ಮತ್ತೆ ಎರಡು ವಾರ­ ವಿಸ್ತರಿಸಲು ನಿರ್ಧರಿಸ­ಲಾಗಿದೆ.

ಲೋಕಸಭಾ ಸ್ಪೀಕರ್‌ ಮೀರಾ ಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಮಂಗಳ­ವಾರ ಇಲ್ಲಿ ನಡೆದ ಸರ್ವಪಕ್ಷ­ಗಳ ಸಭೆಯಲ್ಲಿ ಈ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.

ಇದರ­ನ್ವಯ, ಈ ತಿಂಗಳ 20ರಿಂದ ಒಂದು ವಾರ ಕಾಲ ಕ್ರಿಸ್‌ಮಸ್‌ ಅಂಗ­ವಾಗಿ  ಸಂಸತ್‌ಗೆ ಬಿಡುವು ಇರಲಿದೆ. ಆನಂತರ 12 ಕೆಲಸದ ದಿವಸಗಳಲ್ಲಿ ಅಧಿ­ವೇಶನ ಮುಂದುವರಿಯಲಿದೆ.

ಅಧಿವೇಶನ ವಿಸ್ತರಿಸಲು ಎಲ್ಲ ಪಕ್ಷ­ಗಳಲ್ಲೂ  ಬೆಂಬಲ ವ್ಯಕ್ತ­ವಾಗಿದೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್‌ ತಿಳಿಸಿದರು.

ಆದರೆ ರಾಜ್ಯ­ಸಭೆ ಸದಸ್ಯರು ಹಾಗೂ ಈಶಾನ್ಯ ಮತ್ತು ದಕ್ಷಿಣ ರಾಜ್ಯಗಳ ಸಂಸ­ದರ ಜತೆ ಚರ್ಚಿಸಿದ ನಂತರ ಅಂತಿಮ ನಿರ್ಧಾರ ಕೈಗೊಳ್ಳ­ಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಕಮಲ್‌­ನಾಥ್‌ ಹೇಳಿದರು.

ತೆಲಂಗಾಣಕ್ಕೆ ಆಗ್ರಹ: ಪ್ರಸಕ್ತ ಅಧಿವೇಶನದಲ್ಲಿ ಚರ್ಚಿಸುವ ವಿಷಯ­ಗಳ ಸರ್ಕಾರದ ಕಲಾಪ ಪಟ್ಟಿ­ಯಲ್ಲಿ ತೆಲಂ­ಗಾಣದ ಪ್ರಸ್ತಾಪ ಇಲ್ಲದಿ­ದ್ದರೂ ಈಗಲೇ ಮಸೂ­ದೆಗೆ ಅಂಗೀ­ಕಾರ ನೀಡಬೇಕೆಂದು ಹಲವು ಪಕ್ಷ­­­ಗಳು ಸರ್ವ­ಪಕ್ಷಗಳ ಸಭೆಯಲ್ಲಿ ಒತ್ತಾಯಿ­ಸಿದವು.

ಪ್ರಧಾನಿ ಸ್ಪಷ್ಟನೆ:  ಈ ಬೇಡಿಕೆ ಹಿನ್ನೆಲೆಯಲ್ಲಿ ನಂತರ ಸುದ್ದಿ­ಗಾರರ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮನ­ಮೋಹನ್‌ ಸಿಂಗ್‌, ‘ಪ್ರತ್ಯೇಕ ತೆಲಂ­ಗಾಣ ರಾಜ್ಯ ರಚನೆಗೆ ಸರ್ಕಾರ ಬದ್ಧ­ವಾಗಿದ್ದು, ವಿಳಂಬವಾದ ಈ ಪ್ರಕ್ರಿಯೆ ಪೂರ್ಣ­ಗೊಳಿಸಲು ಎಲ್ಲ ಪ್ರಯತ್ನ ನಡೆ­ದಿದೆ’ ಎಂದು ತಿಳಿಸಿದರು.

ಈ ಮಧ್ಯೆ, ಸರ್ಕಾರ ಈಗಾಗಲೇ ಘೋಷಿಸಿರುವಂತೆ ಮಹಿಳಾ ಮೀಸಲು ಮತ್ತು ಲೋಕಪಾಲ ಮಸೂದೆಗಳನ್ನು ಪ್ರಸಕ್ತ ಅಧಿವೇಶನ­ದಲ್ಲಿ ಅಂಗೀ­ಕರಿಸಲು ಆದ್ಯತೆ ನೀಡಲಾಗುತ್ತದೆ.

ಈ ಅಧಿ­ವೇ­ಶನ ಬಿಸಿಬಿಸಿ ಚರ್ಚೆಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಎಡಪಕ್ಷಗಳು ಬೆಲೆ ಏರಿಕೆ ಬಗ್ಗೆ ನಿಲುವಳಿ ಸೂಚನೆ ಮಂಡಿಸಲಿದ್ದು,  ಬಿಜೆಪಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಳ ಮತ್ತು ಪಟ್ನಾ ಸ್ಫೋಟ ಕಾರಣ ಆಂತರಿಕ ಭದ್ರತೆ ಕುರಿತು ಚರ್ಚೆಗೆ ಆಗ್ರಹಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.