ADVERTISEMENT

ಅನ್ಯರ ತೇಜೋವಧೆಗೆ ಪ್ರೋತ್ಸಾಹವಿಲ್ಲ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 19:30 IST
Last Updated 19 ಜೂನ್ 2011, 19:30 IST

ನವದೆಹಲಿ (ಪಿಟಿಐ): ಕಾಂಗ್ರೆಸ್ ವಕ್ತಾರರು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರನ್ನು `ಆರ್‌ಎಸ್‌ಎಸ್-ಬಿಜೆಪಿ~ ಮುಖವಾಡ ಎಂದು ನಿಂದಿಸಿದ್ದರ ವಿರುದ್ಧ ಹಜಾರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರಕ್ಕೆ ಸೋನಿಯಾ ಗಾಂಧಿ ಭಾನುವಾರ ಪ್ರತಿಕ್ರಿಯಿಸಿದ್ದಾರೆ.

`ಯಾರೊಬ್ಬರ ಚಾರಿತ್ರ್ಯವಧೆ ಮಾಡುವಂತಹ ಹೇಳಿಕೆ ಮತ್ತು ರಾಜಕೀಯವನ್ನು ಬೆಂಬಲಿಸುವುದಿಲ್ಲ ಅಥವಾ ಪ್ರೋತ್ಸಾಹಿಸುವುದಿಲ್ಲ~ ಎಂದು ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

`ಜೂನ್ 9ರ ನಿಮ್ಮ ಪತ್ರ ತಲುಪಿದೆ. ನಾನು ದೆಹಲಿಯಲ್ಲಿರದ ಕಾರಣ ಉತ್ತರಿಸಲು ವಿಳಂಬವಾಗಿದೆ. ಪತ್ರದಲ್ಲಿ ಪ್ರಸ್ತಾಪ ಆಗಿರುವ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ನಿಲುವನ್ನು ಏಪ್ರಿಲ್ 19ರ ಪತ್ರದಲ್ಲಿಯೇ ಸ್ಪಷ್ಟಪಡಿಸಿದ್ದು, ಯಾರೊಬ್ಬರ ತೇಜೋವಧೆ ಮಾಡುವ ಹೇಳಿಕೆಗಳಲ್ಲಿ ನಂಬಿಕೆಯೂ ಇಲ್ಲ. ಅವುಗಳಿಗೆ ಪ್ರೋತ್ಸಾಹ ಮತ್ತು ಬೆಂಬಲಿಸುವುದಿಲ್ಲ. ಈ ನಿಟ್ಟಿನಲ್ಲಿ ಬದ್ಧವಾಗಿದ್ದೇನೆ ಎಂದು ಭರವಸೆ ನೀಡುತ್ತೇನೆ~ ಎಂದಿದ್ದಾರೆ.

ಕಾಂಗ್ರೆಸ್ ವಕ್ತಾರ ಜನಾರ್ಧನ ದ್ವಿವೇದಿ ಅವರು ಹಜಾರೆ ಅವರನ್ನು `ಆರ್‌ಎಸ್‌ಎಸ್-ಬಿಜೆಪಿ~ ಮುಖವಾಡ ಎಂದು ನಿಂದಿಸಿದ್ದರು. ಇದರಿಂದ ತಮ್ಮ ಮನಸ್ಸಿಗೆ ತೀವ್ರ ನೋವಾಗಿದೆ ಎಂದು ಸೋನಿಯಾಗೆ ಬರೆದ  ಪತ್ರದಲ್ಲಿ ಹಜಾರೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಕಾಂಗ್ರೆಸ್ ವಕ್ತಾರರ ಇಂತಹ ವರ್ತನೆಯಿಂದ ಜನರು ತಮ್ಮಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಾರೆ. ಹಾಗೂ ಇದು ತಮ್ಮ ವಿರುದ್ಧ ಕಾಂಗ್ರೆಸ್ ಮತ್ತು ಯುಪಿಎ ಸರ್ಕಾರ ಮಾಡುತ್ತಿರುವ `ಸಂಚು~ ಎಂದೂ ಹಜಾರೆ ಪತ್ರದಲ್ಲಿ ಆರೋಪಿಸಿದ್ದರು.ಲೋಪಕಾಲ ಮಸೂದೆ ತಮ್ಮ ಅಧ್ಯಕ್ಷತೆಯಲ್ಲಿರುವ ರಾಷ್ಟ್ರೀಯ ಸಲಹಾ ಪರಿಷತ್ ವಿಷಯ ಸೂಚಿಯಲ್ಲಿದೆ ಎಂದೂ ಸೋನಿಯಾ ಪತ್ರದಲ್ಲಿ ತಿಳಿಸಿದ್ದಾರೆ.

`ಲಂಚ ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವಂತಹ ತುರ್ತು ಅಗತ್ಯ ಇದೆ ಎಂದು ನಂಬಿದ್ದೇನೆ. ಈ ನಿಟ್ಟಿನಲ್ಲಿ ನನ್ನ ಬದ್ಧತೆ ಬಗ್ಗೆ ನಿಮಗೆ ಅನುಮಾನ ಬೇಡ~ ಎಂದೂ ಆಶ್ವಾಸನೆ ನೀಡಿದ್ದಾರೆ. `ನಮ್ಮ ಸಂಸದೀಯ ಪ್ರಜಾತಂತ್ರದಲ್ಲಿ ಲೋಕಪಾಲ ಸಂಸ್ಥೆಯಂತಹ ಸಂಸ್ಥೆಯ ಅಗತ್ಯ ಇದೆ. ಅದಕ್ಕೆ ನನ್ನ ಬೆಂಬಲವೂ ಇದೆ~ ಎಂದು ಸೋನಿಯಾ ಗಾಂಧಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.