ADVERTISEMENT

ಅಪಹೃತ ಜಿಲ್ಲಾಧಿಕಾರಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 18:15 IST
Last Updated 22 ಫೆಬ್ರುವರಿ 2011, 18:15 IST

ಭುವನೇಶ್ವರ (ಪಿಟಿಐ/  ಐಎಎನ್‌ಎಸ್): ಒಡಿಶಾ ಜಿಲ್ಲಾಧಿಕಾರಿ ಅಪಹರಣ ಪ್ರಕರಣ ಸುಖಾಂತ್ಯ ಗೊಂಡಿದ್ದು, ಮಂಗಳವಾರ ರಾತ್ರಿ ಅವರೂ ಸೇರಿದಂತೆ ಇಬ್ಬರನ್ನು ಬಿಡುಗಡೆ ಮಾಡಲಾಗಿದೆ. ಮಾಲ್ಕನ್ ಗಿರಿ  ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.

ಜಿಲ್ಲಾಧಿಕಾರಿ ಆರ್.ವಿ.ಕೃಷ್ಣ ಮತ್ತು ಎಂಜಿನಿಯರ್ ಪವಿತ್ರಾ ಮಝಿ ಅವರನ್ನು ಇನ್ನು 48 ಗಂಟೆಗಳಲ್ಲಿ ಬಿಡುಗಡೆ ಮಾಡಲು ನಕ್ಸಲೀಯರು ಒಪ್ಪಿಕೊಂಡಿದ್ದಾರೆ ಎಂದು ಸಂಧಾನಕಾರ ಪ್ರೊ.ಹರಗೋಪಾಲ್ ಈ ಮೊದಲು ತಿಳಿಸಿದ್ದರು.

ಇದಕ್ಕೆ ಮುನ್ನ ಅವರು ಇತರ ಸಂಧಾನಕಾರರೊಂದಿಗೆ ಸೇರಿ, ಬಂಧಿತ ಹಿರಿಯ ನಕ್ಸಲ್ ನಾಯಕ ಗಂಟಿ ಪ್ರಸಾದಂ ಅವರೊಂದಿಗೆ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ನಕ್ಸಲೀಯರು  ಏಳು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದರು. ಇವುಗಳಲ್ಲಿ ಬಂಧಿತ ಮಾವೋವಾದಿ ನಾಯಕರನ್ನು ಬಿಡುಗಡೆ ಮಾಡಬೇಕೆಂಬ ಬೇಡಿಕೆ ಯನ್ನು ಸರ್ಕಾರ  ತಿರಸ್ಕರಿಸಿದೆ.

‘ಗಂಟಿ ಪ್ರಸಾದಂ ಅವರ ಸಲಹೆಗಳನ್ನು ನಾವು ಸರ್ಕಾರಕ್ಕೆ ತಿಳಿಸಿದ್ದೇವೆ. ಮಾತುಕತೆಗಳು ಸಕಾರಾತ್ಮಕ ಹಾದಿಯಲ್ಲಿ ಸಾಗಿವೆ. ಪ್ರಕರಣ ಶೀಘ್ರವೇ ಸುಖಾಂತ್ಯ ಕಾಣಲಿದೆ’ ಎಂದು ಹರಗೋಪಾಲ್ ಮತ್ತು ದಂಡಪಾಣಿ ಮೊಹಂತಿ ಆಶಾಭಾವ ವ್ಯಕ್ತಪಡಿಸಿದ್ದರು. ಇದೇ ವೇಳೆ ರಾಜ್ಯ ಗೃಹ ಕಾರ್ಯದರ್ಶಿ ಯು.ಎನ್.ಬೆಹೆರಾ ಕೂಡಾ ‘ಅಪಹರಣ ಪ್ರಕರಣ ಶೀಘ್ರವೇ ಸುಖಾಂತ್ಯ ಕಾಣಲಿದೆ. ಪ್ರಸಾದಂ ಅವರ ಜೊತೆ ಮಧ್ಯವರ್ತಿಗಳು ನಡೆಸಿದ ಮಾತುಕತೆಗಳು ನಿರ್ಣಾಯಕ ಹಂತಕ್ಕೆ ಬಂದು ನಿಂತಿವೆ’ ಎಂದು ತಿಳಿಸಿದ್ದರು.

ಚರ್ಚೆಯ ನಂತರ ಪ್ರಸಾದಂ ಅವರನ್ನು ನಗರದ ಝಾರ್‌ಪಾಡಾ ಜೈಲಿನಲ್ಲಿ ಇರಿಸಲಾಯಿತು. ತಮ್ಮ ಪ್ರಮುಖ ನಾಯಕರನ್ನು ಬಿಡುಗಡೆ ಮಾಡಬೇಕೆಂಬ ನಕ್ಸಲೀಯರ ಪಟ್ಟಿಯಲ್ಲಿ ಪ್ರಸಾದಂ ಪ್ರಮುಖರಾಗಿದ್ದಾರೆ. ಆಂಧ್ರ ಪ್ರದೇಶ ಹಾಗೂ ಒಡಿಶಾದಲ್ಲಿ ಅವರ ವಿರುದ್ಧ ಸುಮಾರು 100 ಮೊಕದ್ದಮೆಗಳಿವೆ. ಮತ್ತೊಬ್ಬ ನಾಯಕ ಶ್ರೀರಾಮುಲು ಶ್ರೀನಿವಾಸಲುಗೂ ತ್ವರಿತ ಗತಿಯ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಜೈಲಿನಲ್ಲೇ ಇರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.