ADVERTISEMENT

ಅಪಹೃತ ಡಿಸಿ, ಎಂಜಿನಿಯರ್ ಸುರಕ್ಷಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 17:55 IST
Last Updated 19 ಫೆಬ್ರುವರಿ 2011, 17:55 IST

ಭುವನೇಶ್ವರ (ಪಿಟಿಐ): ನಕ್ಸಲರಿಂದ ಅಪಹರಣಗೊಂಡಿರುವ ಮಾಲ್ಕನ್  ಗಿರಿ ಜಿಲ್ಲಾಧಿಕಾರಿ ಆರ್. ವಿ. ಕೃಷ್ಣ ಮತ್ತು ಕಿರಿಯ ಎಂಜಿನಿಯರ್ ಪವಿತ್ರ ಮೋಹನ್ ಮಝಿ ಅವರನ್ನು ಬಿಡಿ   ಸಿಕೊಳ್ಳಲು ಭಾರಿ ಪ್ರಯತ್ನ ನಡೆಯುತ್ತಿದ್ದು, ನಕ್ಸಲರು ಸೂಚಿಸಿದ ಇಬ್ಬರು ಸಂಧಾನಕಾರರೊಂದಿಗೆ ಮಾತುಕತೆಗೆ ವೇದಿಕೆ ಸಜ್ಜಾಗಿದೆ.ನಕ್ಸಲರ ವಶದಲ್ಲಿ ಇಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಬಿ. ಕೆ. ಪಟ್ನಾಯಕ್ ತಿಳಿಸಿದ್ದು, ಸಂಧಾನಕಾರರ ಜತೆಗೆ ಮಾತನಾಡುವುದಕ್ಕೆ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

 ನಕ್ಸಲರು ಸೂಚಿಸಿದ ಇಬ್ಬರು ಸಂಧಾನಕಾರರಾದ ಪ್ರೊ. ಸೋಮೇಶ್ವರ ರಾವ್ ಮತ್ತು ಪ್ರೊ.ಹರ್‌ಗೋಪಾಲ್ ಆಂಧ್ರದಿಂದ ಇಲ್ಲಿಗೆ ಬರುತ್ತಿದ್ದು, ಸಂಧಾನಕಾರರು ಮುಂದಿಟ್ಟಿರುವ ಬೇಡಿಕೆಗಳ ಬಗ್ಗೆ ಅವರೊಂದಿಗೆ ಶನಿವಾರವೇ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶನಿವಾರ ರಾಜ್ಯ ವಿಧಾನಸಭೆಯಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದರು.

ತಮ್ಮ ಬೇಡಿಕೆಗಳನ್ನು ಈಡೇರಿಸುವುದಕ್ಕಾಗಿ ನಕ್ಸಲರು ತಮ್ಮ ಅಂತಿಮ ಗಡುವನ್ನು ಒಂದು ದಿನ ವಿಸ್ತರಿಸಿದ್ದು, ಒತ್ತೆಯಾಳುಗಳಾಗಿರುವ ಇಬ್ಬರಿಗೂ ಯಾವುದೇ ತೊಂದರೆ ಕೊಡದಂತೆ ಸರ್ಕಾರ ನಕ್ಸಲರನ್ನು ಕೋರಿಕೊಂಡಿದೆ ಎಂದರು. ಸಂಧಾನಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡುವುದಕ್ಕಾಗಿ ಸರ್ಕಾರವು ಈಗಾಗಲೇ ರಾಜ್ಯದ ಎಲ್ಲೆಡೆ ನಕ್ಸಲರ ವಿರುದ್ಧದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

ಈ ಮಧ್ಯೆ, ನವೀನ್ ಪಟ್ನಾಯಕ್ ಅವರು ಉನ್ನತ ಮಟ್ಟದ ಸಭೆ ನಡೆಸಿ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದಾರೆ. ಸಭೆಯಲ್ಲಿ ರಾಜ್ಯದ ಮುಖ್ಯಕಾರ್ಯದರ್ಶಿ ಬಿ.ಕೆ. ಪಟ್ನಾಯಕ್, ಗೃಹ ಕಾರ್ಯದರ್ಶಿ ಯು.ಎನ್. ಬೆಹರಾ ಸಹಿತ ಇತರ ಹಿರಿಯ ಅಧಿಕಾರಿಗಳಿದ್ದರು.

ಶಾಸಕಿಯ ವಿನೂತನ ಮೊರೆ
 ಅಪಹೃತ ಅಧಿಕಾರಿಗಳನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಚಿತ್ರಕೊಂಡ ಮೀಸಲು ಕ್ಷೇತ್ರದ ಕಾಂಗ್ರೆಸ್ ಶಾಸಕಿ ಮತ್ತು ಬುಡಕಟ್ಟು ನಾಯಕಿ ಮಮತಾ ಮಾಧಿ ಶನಿವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯುದ್ದಕ್ಕೂ ಭಿತ್ತಿಫಲಕ ಹಿಡಿದು ಎದ್ದುನಿಂತು ವಿನೂತನವಾಗಿ ಮೌನಪ್ರತಿಭಟನೆ ನಡೆಸಿದರು.

‘ಜಿಲ್ಲಾಧಿಕಾರಿ ಮತ್ತು ಕಿರಿಯ ಎಂಜಿನಿಯರ್ ಅವರನ್ನು ಬಿಡುಗಡೆಗೊಳಿಸಲು ನಾನು ನಕ್ಸಲರು ಮತ್ತು ಸರ್ಕಾರವನ್ನು ಕೋರುತ್ತಿದ್ದೇನೆ’ ಎಂದು ಬರೆದಿದ್ದ ಫಲಕವನ್ನು ಅವರು ಹಿಡಿದುಕೊಂಡಿದ್ದರು. ಸದನದ ಹೊರಗೆ ಅವರು ಮಾತನಾಡಿ, ಮಾಲ್ಕನ್‌ಗಿರಿಯಲ್ಲಿ ಸದ್ಯ ಜಿಲ್ಲಾಡಳಿತವೇ ಕುಸಿದು ಬಿದ್ದಿದೆ, ಅಲ್ಲಿಗೆ ತಕ್ಷಣ ಅನುಭವಿ ಜಿಲ್ಲಾಧಿಕಾರಿಯೊಬ್ಬರನ್ನು ನಿಯುಕ್ತಿಗೊಳಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.