ADVERTISEMENT

ಅಫ್ಜಲ್‌ಗೆ ಗಲ್ಲು ಶಿಕ್ಷೆ ಯಾವಾಗ: ಬಿಜೆಪಿ ಪ್ರಶ್ನೆ

ಸಂಸತ್ ಭವನದ ಮೇಲೆ ಉಗ್ರರ ದಾಳಿಗೆ 11 ವರ್ಷ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ನವದೆಹಲಿ (ಪಿಟಿಐ/ಐಎಎನ್‌ಎಸ್): ಸಂಸತ್ ಭವನದ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಹುತಾತ್ಮರಾದವರಿಗೆ ನಿಜವಾದ ಗೌರವ ಸಲ್ಲಬೇಕಾದರೆ ದಾಳಿ ನಡೆದು 11 ವರ್ಷವಾದ ಇಂದು (ಗುರುವಾರ) ಘಟನೆಯ ಪ್ರಮುಖ ಅಪರಾಧಿ ಅಫ್ಜಲ್ ಗುರುಗೆ ಮರಣ ದಂಡನೆ ಜಾರಿಗೊಳಿಸುವ ದಿನಾಂಕ ಪ್ರಕಟಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ವಿಧಿಸುವ ದಿನಾಂಕವನ್ನು ಗೃಹ ಸಚಿವರು ಸಂಸತ್ತಿನಲ್ಲಿ ಪ್ರಕಟಿಸಿದರೆ ಹುತಾತ್ಮರ ಕುಟುಂಬಕ್ಕೆ ದೊಡ್ಡ ಸಮಾಧಾನ ಸಿಗುತ್ತದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ತಿಳಿಸಿದರು.

2001ರಲ್ಲಿ ಸಂಸತ್ ಭವನದ ಮೇಲೆ ದಾಳಿ ನಡೆದಾಗ ಮಡಿದ 9 ಮಂದಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಮಾತನಾಡುತ್ತಿದ್ದ ಅವರು, ಅಪರಾಧಿಗಳಿಗೆ ವಿಧಿಸಿರುವ ಮರಣ ದಂಡನೆ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಕಾಯಂಗೊಳಿಸಿದ್ದರೂ ಇದುವರೆಗೆ ಶಿಕ್ಷೆ ಜಾರಿ ಏಕೆ ಆಗಿಲ್ಲ ಎಂಬುದು ಅರ್ಥವಾಗುತ್ತಿಲ್ಲ ಎಂದರು.

ಮುಂಬೈ ಮೇಲೆ ದಾಳಿ ಮಾಡಿದ್ದ ಅಜ್ಮಲ್ ಕಸಾಬ್‌ನನ್ನು ಗಲ್ಲಿಗೇರಿಸಿದ ಮೇಲೆ ಅಫ್ಜಲ್ ಗುರುವನ್ನೂ ಶೀಘ್ರ ಗಲ್ಲಿಗೇರಿಸಬಹುದು ಎಂಬ ವಿಶ್ವಾಸ ಮೂಡಿದೆ ಎಂದು ಹೇಳಿದರು.

ಸಿಂಗ್ ವಿರೋಧ: ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಸುಷ್ಮಾ ಸ್ವರಾಜ್ ಅವರು ಸರ್ಕಾರದ ಮೇಲೆ ಒತ್ತಡ ಹೇರುವಂತಹ ಹೇಳಿಕೆ ನೀಡಿರುವುದು ಸರಿಯಲ್ಲ ಮತ್ತು ಇಂತಹ ವಿಷಯಗಳಲ್ಲಿ ರಾಜಕೀಯ ಮಾಡುವುದು ತಪ್ಪು ಎಂದು ಗೃಹ ಖಾತೆಯ ರಾಜ್ಯ ಸಚಿವ ಆರ್.ಪಿ.ಎನ್.ಸಿಂಗ್ ತಿಳಿಸಿದ್ದಾರೆ.  

ಪ್ರತಿ ವರ್ಷದ ಡಿ. 13ರಂದು ಈ ವಿಚಾರವಾಗಿ ರಾಜಕಾರಣ ಮಾಡುವುದರಿಂದ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದಂತಾಗುವುದಿಲ್ಲ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಹುತಾತ್ಮರಿಗೆ ಸಂಸದರ ಶ್ರದ್ಧಾಂಜಲಿ: 11 ವರ್ಷಗಳ ಹಿಂದೆ ಸಂಸತ್ ಭವನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದಾಗ ಹುತಾತ್ಮರಾದ 9 ಮಂದಿಗೆ ಸಂಸತ್ತಿನ ಉಭಯ ಸದನಗಳು ಗುರುವಾರ ಶ್ರದ್ಧಾಂಜಲಿಸಲ್ಲಿಸಿದವು.
ಎರಡೂ ಸದನಗಳಲ್ಲಿ ಸದಸ್ಯರು ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಸಂಸತ್ ಭವನದಲ್ಲಿ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಮುಖಂಡ ಎಲ್. ಕೆ. ಅಡ್ವಾಣಿ, ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.