ADVERTISEMENT

ಅಬು ಜುಂದಾಲ್ ಹಾಜರಿಗೆ ವಾರಂಟ್

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2012, 19:30 IST
Last Updated 3 ನವೆಂಬರ್ 2012, 19:30 IST

ನವದೆಹಲಿ (ಪಿಟಿಐ): 26/11ರ ಮುಂಬೈ ದಾಳಿಯ ಪ್ರಮುಖ ರೂವಾರಿ, ಲಷ್ಕರ್-ಎ-ತೊಯ್ಬಾ ಸಂಘಟನೆಯ ಭಯೋತ್ಪಾದಕ ಅಬು ಜುಂದಾಲ್‌ನನ್ನು ಇದೇ 26ರಂದು ಹಾಜರು ಪಡಿಸುವಂತೆ ಇಲ್ಲಿಯ ಜಿಲ್ಲಾ ನ್ಯಾಯಾಲಯವು ವಾರಂಟ್ ಹೊರಡಿಸಿದೆ.

ಜುಂದಾಲ್ ಸದ್ಯ ಗುಜರಾತ್ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳ ವಶದಲ್ಲಿ ಇದ್ದಾನೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದರಿಂದ ನ್ಯಾಯಾಧೀಶ ಐ. ಎಸ್. ಮೆಹತಾ ಅವರು ಆತನ ವಿರುದ್ಧ ವಾರಂಟ್ ಹೊರಡಿಸಿದರು.

2006ರಲ್ಲಿ ಅಹಮದಾಬಾದ್ ರೈಲು ನಿಲ್ದಾಣದಲ್ಲಿ  ಕರ್ಣವತಿ ಎಕ್ಸ್‌ಪ್ರೆಸ್‌ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಜುಂದಾಲ್‌ನನ್ನು ಗುಜರಾತ್ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪ್ರಕರಣದ ಸಂಚಿನಲ್ಲಿಯೂ ಜುಂದಾಲ್ ಭಾಗವಹಿಸಿದ್ದ ಎನ್ನಲಾಗಿದೆ.

 ಲಷ್ಕರ್-ಎ-ತೊಯ್ಬಾ ಸಂಘಟನೆಯು ದೇಶದಾದ್ಯಂತ ವಿದ್ವಂಸಕ ಕೃತ್ಯ ಎಸಗಲು ನಡೆಸಿದ ಸಂಚಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಧಿಕಾರಿಗಳು ಸಲ್ಲಿಸಿರುವ ಪ್ರಥಮ ಮಾಹಿತಿ ವರದಿಗೆ ಸಂಬಂಧಿಸಿದಂತೆ ಜುಂದಾಲ್‌ನನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ನಂತರ ಅ.20ರಂದು ಎನ್‌ಐಎ ಅಧಿಕಾರಿಗಳು ಜುಂದಾಲ್ ವಿಚಾರಣೆ ಮುಕ್ತಾಯವಾಗಿದೆ ಎಂದು ತಿಳಿಸಿದ್ದರಿಂದ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಶನಿವಾರ ಆತನ ನ್ಯಾಯಾಂಗ ಬಂಧನ ಅವಧಿ ಕೊನೆಗೊಂಡಿದೆ.

ಜಮಾ ಮಸೀದಿ ಸ್ಫೋಟಕ್ಕೆ ಸಂಬಂಧಿಸಿದಂತೆ ವಿಚಾರಣೆ ಪೂರ್ತಿಗೊಳಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ ನಂತರ ಮುಂಬೈ ಎಟಿಎಸ್ ಅಧಿಕಾರಿಗಳು ಜುಂದಾಲ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು.

2006ರಲ್ಲಿ ನಡೆದ ಔರಂಗಾಬಾದ್ ಶಸ್ತ್ರಾಸ್ತ್ರ ಸಾಗಾಟ ಪ್ರಕರಣ, ಮುಂಬೈ ದಾಳಿ, ಜರ್ಮನ್ ಬೇಕರಿ ಬಳಿ ಸ್ಫೋಟ ಮತ್ತು ನಾಸಿಕ್ ಸೇನಾ ಅಕಾಡೆಮಿ ಮೇಲಿನ ದಾಳಿಗೆ ಸಂಬಂಧಿಸಿದಂತೆ ಮುಂಬೈ ಎಟಿಎಸ್ ಅಧಿಕಾರಿಗಳು ಈಗಾಗಲೇ ಅಬು ಜುಂದಾಲನನ್ನು ವಿಚಾರಣೆಗೆ ಗುರಿಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.