ADVERTISEMENT

ಅಮರನಾಥ ಯಾತ್ರೆ ವೇಳೆ ಹತ್ಯೆಯಾಗಿದ್ದ ಮಹಿಳೆಯ ಕುಟುಂಬದವರಿಗೆ ವಿಮೆ ಮೊತ್ತ ನಿರಾಕರಿಸಿದ ಬ್ಯಾಂಕ್

ಏಜೆನ್ಸೀಸ್
Published 15 ಜುಲೈ 2017, 12:21 IST
Last Updated 15 ಜುಲೈ 2017, 12:21 IST
ಪ್ರದೀಪ್ ಠಾಕೂರ್ (ಸಂತ್ರಸ್ತೆ ನಿರ್ಮಲಾ ಅವರ ಮಗ)
ಪ್ರದೀಪ್ ಠಾಕೂರ್ (ಸಂತ್ರಸ್ತೆ ನಿರ್ಮಲಾ ಅವರ ಮಗ)   

ಮುಂಬೈ: ಅಮರನಾಥ ಯಾತ್ರೆ ವೇಳೆ ಇತ್ತೀಚೆಗೆ ಉಗ್ರರ ದಾಳಿಯಲ್ಲಿ ಮೃತಪಟ್ಟ ನಿರ್ಮಲಾ ಠಾಕೂರ್ ಎಂಬುವವರ ಕುಟುಂಬದವರಿಗೆ ಅಪಘಾತ ವಿಮೆ ನೀಡಲು ಬ್ಯಾಂಕ್ ಅಧಿಕಾರಿಗಳು ನಿರಾಕರಿಸಿದ ಘಟನೆ ಮಹಾರಾಷ್ಟ್ರದ ಡಹಾಣು ಎಂಬಲ್ಲಿ ನಡೆದಿದೆ. ಪ್ರಧಾನ ಮಂತ್ರಿ ಜನ ಧನ ಯೋಜನೆ ಅನ್ವಯ ತೆರೆದಿದ್ದ ಬ್ಯಾಂಕ್ ಖಾತೆ ಇದಾಗಿದೆ.

₹ 1 ಲಕ್ಷದವರೆಗೆ ಅಪಘಾತ ವಿಮೆ ಒದಗಿಸುವ ವಿಚಾರಕ್ಕೆ ಸಂಬಂಧಿಸಿದ ಅರ್ಜಿಯನ್ನು ಸಂತ್ರಸ್ತೆ ಭರ್ತಿ ಮಾಡಿರಲಿಲ್ಲ ಎಂದು ಕೆನರಾ ಬ್ಯಾಂಕ್‌ನ ಡಹಾಣು ಶಾಖೆಯ ಅಧಿಕಾರಿಗಳು ಹೇಳುತ್ತಿರುವುದಾಗಿ ನಿರ್ಮಲಾ ಅವರ ಮಗ ಪ್ರದೀಪ್ ಠಾಕೂರ್ ತಿಳಿಸಿದ್ದಾರೆ. ‘ನನ್ನ ತಾಯಿಯವರು ಪ್ರಧಾನ ಮಂತ್ರಿ ಜನ ಧನ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆ ತೆರೆದಿದ್ದರು. ಬ್ಯಾಂಕ್‌ನವರು ವಿಮೆ ಮೊತ್ತ ಪಾವತಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಅಪಘಾತ ವಿಮೆ ನೀಡುವುದಾಗಿ ಭರವಸೆ ನೀಡಿದ್ದರು ಎಂದು ಪ್ರದೀಪ್ ಠಾಕೂರ್ ಹೇಳಿದ್ದಾರೆ. ನಿರ್ಮಲಾ ಅವರು ಖಾತೆ ತೆರೆಯುವ ವೇಳೆ ತಮ್ಮ ಪತಿಯನ್ನು ನಾಮನಿರ್ದೇಶನ ಮಾಡಿದ್ದರು.

‘ನಾವು ಹೆಚ್ಚು ವಿದ್ಯಾವಂತರಲ್ಲ. ಖಾತೆ ತೆರೆಯವಾಗ ಅದಕ್ಕೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು ತುಂಬುವಂತೆ ಮಾಹಿತಿ ನೀಡಬೇಕಾದದ್ದು ಬ್ಯಾಂಕ್ ಸಿಬ್ಬಂದಿಯ ಕರ್ತವ್ಯ’ ಎಂದು ಪ್ರದೀಪ್ ಹೇಳಿದ್ದಾರೆ. ‘ಖಾತೆ ತೆರೆಯುವ ಪ್ರಕ್ರಿಯೆ ಹೇಗೆ ಎಂಬುದು ನಮಗೇನು ಗೊತ್ತು? ಬ್ಯಾಂಕ್ ಸಿಬ್ಬಂದಿ ಹೇಳಿದ್ದನ್ನಷ್ಟೇ ನಾವು ಮಾಡಿದ್ದೇವೆ. ವಿಮೆಯ ಅರ್ಜಿ ಬಗ್ಗೆ ಪ್ರಸ್ತಾವ ಮಾಡಿರಲಿಲ್ಲ’ ಎಂದು ಸಂತ್ರಸ್ತೆಯ ಸೊಸೆ ರೇಖಾ ತಿಳಿಸಿದ್ದಾರೆ. ಅವರಿಬ್ಬರೂ ಜತೆಯಾಗಿ ಖಾತೆ ತೆರೆದಿದ್ದರು.

ADVERTISEMENT

ನಮ್ಮ ತಪ್ಪಲ್ಲ ಎಂದ ಬ್ಯಾಂಕ್ ಸಿಬ್ಬಂದಿ: ಸಂತ್ರಸ್ತೆಯು ಖಾತೆ ತೆರೆಯುವ ವೇಳೆ ಅರ್ಜಿ ತುಂಬದಿರುವುದು ನಮ್ಮ ತಪ್ಪಲ್ಲ ಎಂದು ಬ್ಯಾಂಕ್‌ನ ಶಾಖಾ ನಿರ್ವಾಹಕರು ಹೇಳಿದ್ದಾರೆ. ತಿಂಗಳಿಗೆ ₹12 ಪಾವತಿಸುವ ಬೇರೊಂದು ವಿಮೆ ಬಗ್ಗೆ ನಿರ್ಮಲಾ ಅವರು ಮಾತನಾಡಿದ್ದರು. ಆ ಬಗ್ಗೆ ಅವರಿಗೆ ಮಾಹಿತಿ ನೀಡಿ ಸಮಸ್ಯೆ ಪರಿಹರಿಸಿದ್ದೆ’ ಎಂದು ಡಹಾಣು ಶಾಖೆಯ ಮ್ಯಾನೇಜರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.