ADVERTISEMENT

ಅಮೆರಿಕದಲ್ಲಿ ರಕ್ತದೋಕುಳಿ: 50ಕ್ಕೂ ಹೆಚ್ಚು ಸಾವು

ಸಂಗೀತ ಕೇಳುತ್ತಿದ್ದವರ ಮೇಲೆ ಗುಂಡಿನ ಮಳೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 19:30 IST
Last Updated 2 ಅಕ್ಟೋಬರ್ 2017, 19:30 IST
ಅಮೆರಿಕದಲ್ಲಿ ರಕ್ತದೋಕುಳಿ: 50ಕ್ಕೂ ಹೆಚ್ಚು ಸಾವು
ಅಮೆರಿಕದಲ್ಲಿ ರಕ್ತದೋಕುಳಿ: 50ಕ್ಕೂ ಹೆಚ್ಚು ಸಾವು   

ಲಾಸ್‌ ವೇಗಸ್‌, ನೆವಾಡ: ಮತ್ತೊಂದು ಭಯಾನಕ ಗುಂಡಿನ ದಾಳಿಗೆ ಅಮೆರಿಕ ಸಾಕ್ಷಿಯಾಗಿದೆ. ಇಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಮೇಲೆ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಗೆ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಎದುರುಗಡೆಯಲ್ಲಿರುವ ಮ್ಯಾಂಡಲೇ ಬೇ ಹೋಟೆಲ್‌ನ 32ನೇ ಮಹಡಿಯಲ್ಲಿದ್ದ ಬಂದೂಕುಧಾರಿ ಕೆಳಗೆ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಮೇಲೆ ಮನಸೋ ಇಚ್ಛೆ ಗುಂಡು ಹಾರಿಸಿದ್ದಾನೆ. ಆತ ಇರುವ ಸ್ಥಳ ಗೊತ್ತಾದ ಬಳಿಕ ಪೊಲೀಸರು ಪ್ರತಿಯಾಗಿ ಗುಂಡು ಹಾರಿಸಿದ್ದಾರೆ. ನಂತರ ಗುಂಡು ಹಾರಾಟ ನಿಂತಿದೆ. ಬಂದೂಕುಧಾರಿ ಇದ್ದ ಕೊಠಡಿಗೆ ಪೊಲೀಸರು ತಲುಪುವ ಮೊದಲೇ ಆತ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ಭಾನುವಾರ ರಾತ್ರಿ ಸ್ಥಳೀಯ ಸಮಯ 10 ಗಂಟೆಯ ಹೊತ್ತಿಗೆ ನಡೆಯಿತು.

ಕಳೆದ ವರ್ಷ ಒರ್ಲಾಂಡೊದ ನೈಟ್‌ ಕ್ಲಬ್‌ವೊಂದರಲ್ಲಿ ನಡೆದ ಗುಂಡು ಹಾರಾಟದಲ್ಲಿ 49 ಮಂದಿ ಬಲಿಯಾಗಿದ್ದರು. ಆದರೆ ಭಾನುವಾರದ ಗುಂಡು ಹಾರಾಟದ  ಮಾರಣಹೋಮ ಅಮೆರಿಕದ ಇತಿಹಾಸದಲ್ಲಿಯೇ ಅತ್ಯಂತ ಘೋರವಾದುದು ಎನ್ನಲಾಗಿದೆ. ಸತ್ತವರ ನಿಖರ ಸಂಖ್ಯೆ ಇನ್ನೂ ತಿಳಿದು ಬಂದಿಲ್ಲ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಬಂದೂಕುಧಾರಿಯನ್ನು ಸ್ಥಳೀಯ ನಿವಾಸಿ ಸ್ಟೀಫನ್‌ ಪ‍್ಯಾಡೊಕ್‌ (64) ಎಂದು ಗುರುತಿಸಲಾಗಿದೆ. ಆದರೆ ಆತ ಯಾಕಾಗಿ ಈ ಕೃತ್ಯ ಎಸಗಿದ ಎಂಬ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಈತನಿಗೆ ಉಗ್ರಗಾಮಿ ಗುಂಪಿನ  ಜತೆ ನಂಟು ಇರುವ ಸಾಧ್ಯತೆ ಇಲ್ಲ. ಜತೆಗೆ, ಆತ ಯಾವ ಧರ್ಮವನ್ನು ಅನುಸರಿಸುತ್ತಿದ್ದ ಎಂಬ ಬಗ್ಗೆಯೂ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಲಾಸ್‌ ವೇಗಸ್‌ನ ಪೊಲೀಸ್‌ ಮುಖ್ಯಸ್ಥ ಜೋಸೆಫ್‌ ಲೊಂಬಾರ್ಡೊ ಹೇಳಿದ್ದಾರೆ.

ಆತ ಇದ್ದ ಕೊಠಡಿಯಲ್ಲಿ ಎಂಟು ಬಂದೂಕುಗಳು ದೊರೆತಿವೆ. ಆತನ ಜತೆಗೆ ಮರಿಲೌ ಡ್ಯಾನ್ಲಿ ಎಂಬ ಮಹಿಳೆಯೂ ವಾಸವಿದ್ದರು. ಗುಂಡು ಹಾರಾಟದಲ್ಲಿ ಅವರು ಭಾಗಿಯಾಗಿದ್ದರೇ ಎಂಬುದನ್ನು ಪೊಲೀಸರು ತಿಳಿಸಿಲ್ಲ. ಸದ್ಯಕ್ಕೆ ಅವರನ್ನು ಪ್ಯಾಡೊಕ್‌ನ ಸಹವರ್ತಿ ಎಂದಷ್ಟೇ ಪೊಲೀಸರು ಗುರುತಿಸಿದ್ದಾರೆ. ಪ್ಯಾಡೊಕ್‌ಗೆ ಸೇರಿದ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೃತರಲ್ಲಿ ಇಬ್ಬರು ಪೊಲೀಸ್‌ ಅಧಿಕಾರಿಗಳು ಇದ್ದಾರೆ. ಆದರೆ ಅವರು ಆಗ ಕರ್ತವ್ಯದಲ್ಲಿ ಇರಲಿಲ್ಲ.

ಹೊಣೆ ಹೊತ್ತ ಐಎಸ್‌

ಈ ದಾಳಿಯ ಹೊಣೆಯನ್ನು ಉಗ್ರಗಾಮಿ ಸಂಘಟನೆ ಐಎಸ್‌ ಹೊತ್ತುಕೊಂಡಿದೆ. ದಾಳಿ ನಡೆಸಿದ ವ್ಯಕ್ತಿಯು ಕೆಲವೇ ತಿಂಗಳ ಹಿಂದೆ ಇಸ್ಲಾಂಗೆ ಮತಾಂತರ ಹೊಂದಿದ್ದ ಎಂದು ಐಎಸ್‌ನ ವಾರ್ತಾ ಸಂಸ್ಥೆ ಅಮಾಕ್‌ ಹೇಳಿದೆ. ಆದರೆ ಐಎಸ್‌ನ ಈ ಹೇಳಿಕೆ ಆಧಾರರಹಿತ ಎಂದು ಅಮೆರಿಕದ ಇಬ್ಬರು ಹಿರಿಯ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ. ದಾಳಿ ನಡೆಸಿದ ಸ್ಟೀಫನ್‌ ಪ್ಯಾಡೊಕ್‌ ಮಾನಸಿಕ ಸಮಸ್ಯೆ ಹೊಂದಿದ್ದ ಎಂದು ಅವರು ತಿಳಿಸಿದ್ದಾರೆ.

ವೇದಿಕೆಯಿಂದ ಓಡಿದ ಗಾಯಕ

ರೂಟ್‌–91 ಎಂಬ ಹೆಸರಿನಲ್ಲಿ ಮೂರು ದಿನಗಳ ಸಂಗೀತ ಕಾರ್ಯಕ್ರಮದ ಸಮಾರೋಪ ಭಾನುವಾರ ಇತ್ತು. ಅಮೆರಿಕದ ಪ್ರಸಿದ್ಧ ಗಾಯಕ ಜೇಸನ್‌ ಆಲ್ಡೀನ್‌ ವೇದಿಕೆಯಲ್ಲಿ ಹಾಡುತ್ತಿದ್ದರು. ಗುಂಡಿನ ಸದ್ದು ಕೇಳಿಸಿದಾಗ ಮೊದಲಿಗೆ ಯಾರೂ ಗಾಬರಿಯಾಗಿರಲಿಲ್ಲ. ಜೇಸನ್‌ ಹಾಡು ಮುಂದುವರಿಸಿದ್ದರು. ಆದರೆ ಅದು ಗುಂಡಿನ ದಾಳಿ ಎಂಬುದು ತಿಳಿಯುತ್ತಿದ್ದಂತೆಯೇ ಜೇಸನ್‌ ವೇದಿಕೆಯಿಂದ ತೆರಳಿದರು.

ನಿಲ್ಲದ ಗುಂಡಿಗೆ ಜನ ಚೆಲ್ಲಾಪಿಲ್ಲಿ

ಎಲ್ಲಿಂದ ಎಂಬುದು ತಿಳಿಯದ ರೀತಿಯಲ್ಲಿ ನಿರಂತರವಾಗಿ ಬಂದು ಬಡಿಯುತ್ತಿದ್ದ ಗುಂಡಿನ ದಾಳಿಗೆ ಬೆಚ್ಚಿದ ಜನ ಸಂಗೀತ ಕಾರ್ಯಕ್ರಮ ಬಿಟ್ಟು ಓಡತೊಡಗಿದರು. ಬಂದೂಕುಧಾರಿ ಎಲ್ಲಿದ್ದಾನೆ ಎಂಬುದನ್ನು ಹುಡುಕುವುದಕ್ಕಾಗಿ ಪೊಲೀಸರು ಮತ್ತು ರಕ್ಷಣಾ ಕಾರ್ಯಕರ್ತರೂ ಅಡ್ಡಾದಿಡ್ಡಿ ಓಡಾಡುತ್ತಿದ್ದರು. ಪರಿಸ್ಥಿತಿ ಸಂಪೂರ್ಣ ಗೊಂದಲಮಯವಾಗಿ ಕಾಲ್ತುಳಿತಕ್ಕೂ ಕಾರಣವಾಯಿತು. 

ಜನಾಕರ್ಷಣೆಯ ಕೇಂದ್ರ

ಲಾಸ್‌ ವೇಗಸ್‌ ಪ್ರಮುಖ ಮನರಂಜನಾ ಕೇಂದ್ರ. ಇಲ್ಲಿ ಹಲವು ಕ್ಯಾಸಿನೊಗಳು (ಜೂಜು ಕೇಂದ್ರ), ನೈಟ್‌ ಕ್ಲಬ್‌ಗಳು ಮತ್ತು ವಿವಿಧ ವಸ್ತುಗಳನ್ನು ಮಾರುವ ಅಂಗಡಿಗಳಿವೆ. ಇಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳೂ ಬಹಳ ಪ್ರಸಿದ್ಧ. ಹಾಗಾಗಿ ಜಗತ್ತಿನ ಬೇರೆ ಬೇರೆ ಭಾಗಗಳಿಂದ ಇಲ್ಲಿಗೆ ವರ್ಷಕ್ಕೆ 35 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಬರುತ್ತಾರೆ.

ಪ್ಯಾರಿಸ್‌ ಗುಂಡಿನ ದಾಳಿಯ ನೆನಪು

ಲಾಸ್‌ ವೇಗಸ್‌ನ ದುರಂತವು 2015ರ ನವೆಂಬರ್‌ನಲ್ಲಿ ಪ್ಯಾರಿಸ್‌ನಲ್ಲಿನ ರಾಕ್‌ ಸಂಗೀತ ಕಾರ್ಯಕ್ರಮದಲ್ಲಿ ನಡೆದ ಗುಂಡಿನ ದಾಳಿಯನ್ನು ನೆನಪಿಸಿತು. ಈ ಗುಂಡಿನ ದಾಳಿಗೆ 89 ಮಂದಿ ಬಲಿಯಾಗಿದ್ದರು. ಪ್ಯಾರಿಸ್‌ನ ವಿವಿಧ ಭಾಗಗಳಲ್ಲಿ ಐಎಸ್‌ ಉಗ್ರರು ನಡೆಸಿದ್ದ ಭಯೋತ್ಪಾದನಾ ಕೃತ್ಯಗಳಲ್ಲಿ ಒಟ್ಟು 130 ಜನರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.