ADVERTISEMENT

ಅಯೋಧ್ಯೆ ತೀರ್ಪು ಪ್ರಶ್ನಿಸಿ ಅಯೋಧ್ಯೆಗೆ ಅನ್ಸಾರಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 19:35 IST
Last Updated 13 ಫೆಬ್ರುವರಿ 2011, 19:35 IST

 ಲಖನೌ (ಪಿಟಿಐ): ಅಯೋಧ್ಯೆಯ ವಿವಾದಾತ್ಮಕ ನಿವೇಶನ ಹಂಚಿಕೆಗೆ ಸಂಬಂಧಿಸಿ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ  ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಪ್ರಕರಣದ ಅತ್ಯಂತ ಹಿರಿಯ ಅರ್ಜಿದಾರ ಹಾಶೀಂ ಅನ್ಸಾರಿ ಹೇಳಿದ್ದಾರೆ.

ವಿವಾದ ಇತ್ಯರ್ಥಪಡಿಸುವ ತಮ್ಮ ಎಲ್ಲ ಯತ್ನಗಳು ವಿಫಲವಾಗಿರುವುದರಿಂದ ಬೇರೆ ಮಾರ್ಗ ತೋಚದೆ ಸುಪ್ರೀಂಕೋರ್ಟ್‌ಗೆ ವಿಶೇಷ ಅರ್ಜಿ ಸಲ್ಲಿಸಲು ನಿರ್ಧರಿಸುವುದಾಗಿ 90ವರ್ಷ ವಯಸ್ಸಿನ ಅನ್ಸಾರಿ ಭಾನುವಾರ ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.

ಮತ್ತೊಮ್ಮೆ ನ್ಯಾಯಾಲಯಕ್ಕೆ ಹೋಗದೆ, ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಬೇಕೆಂಬ ನಿಲುವು ತಾಳಿ, ಈಗ ಮನಸ್ಸು ಬದಲಿಸಲು ಕಾರಣವೇನೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಾನೇನು ಮಾಡಲಿ, ಇದು ಈಗ ಅನಿವಾರ್ಯವಾಗಿದೆ” ಎಂದರು. ‘ವಿರೋಧ ಪಕ್ಷಗಳು ರಾಷ್ಟ್ರವನ್ನು ವಿಭಜಿಸಲು ಬಯಸಿವೆ. ಇದನ್ನು ಸಹಿಸಲು ಸಾಧ್ಯವಿಲ್ಲ” ಎಂದೂ ಅವರು ಉತ್ತರಿಸಿದರು.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮತ್ತು ವಕೀಲ ಜಾಫರ್‌ಯಾಬ್ ಜಿಲಾನಿ ಮಾತನಾಡಿ, ‘ಅನ್ಸಾರಿಯವರ ಮನವಿಯು ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿ ತೆಗೆದುಕೊಂಡ ನಿರ್ಧಾರದಂತೆಯೇ ಇರುತ್ತದೆ’ ಎಂದರು.

 ಮಂಡಳಿ ಫೆಬ್ರುವರಿ 27ರಂದು ನವದೆಹಲಿಯಲ್ಲಿ ಕಾರ್ಯಕಾರಿ ಸಭೆ ನಡೆಸಿ, ಪ್ರಕರಣದ ಬಗ್ಗೆ ಚರ್ಚಿಸಲಿದೆ ಎಂದೂ ಅವರು ಹೇಳಿದರು.

ಈಗಾಗಲೇ ಈ ವಿವಾದದಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಮುಸ್ಲಿಮರ ಪರವಾಗಿ ಸುನ್ನಿ ವಕ್ಫ್ ಮಂಡಳಿ, ಹಫೀಜ್ ಸಿದ್ದಿಕಿ, ಮಿರ್ಜಾವುದ್ದೀನ್ ಮತ್ತು ಹಿಂದೂಗಳ ಪರವಾಗಿ ಭಗವಾನ್ ಶ್ರೀ ರಾಮ್‌ಲಲ್ಲಾ, ನಿರ್ಮೋಹಿ ಅಖಾಡ ಹಾಗೂ ಹಿಂದೂ ಮಹಾಸಭಾ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ.

ಇದಲ್ಲದೆ, ಸೆಪ್ಟೆಂಬರ್ 30ರ ತನ್ನ ತೀರ್ಪನ್ನು ಪುನರ್‌ಪರಿಶೀಲಿಸುವಂತೆ ಕೋರಿ ಇಸ್ಮಾಯಿಲ್ ಫಾರೂಕಿ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 28ಕ್ಕೆ ಮುಂದೂಡಿರುವ ಹೈಕೋರ್ಟ್, ತನ್ನ ಈ ಹಿಂದಿನ ತೀರ್ಪು ಜಾರಿಗಾಗಿ ಮೇ 31ರವರೆಗೆ ಅವಧಿ ವಿಸ್ತರಿಸಿದೆ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.