ADVERTISEMENT

ಅಯ್ಯಂಗಾರ್ ಜಯಾ ಪಾರ್ಥಿವ ಶರೀರ ದಹನ ಮಾಡುವ ಬದಲು ದಫನ ಮಾಡಿದ್ದು ಯಾಕೆ?

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2016, 12:51 IST
Last Updated 6 ಡಿಸೆಂಬರ್ 2016, 12:51 IST
ಅಯ್ಯಂಗಾರ್ ಜಯಾ ಪಾರ್ಥಿವ ಶರೀರ ದಹನ ಮಾಡುವ ಬದಲು ದಫನ ಮಾಡಿದ್ದು ಯಾಕೆ?
ಅಯ್ಯಂಗಾರ್ ಜಯಾ ಪಾರ್ಥಿವ ಶರೀರ ದಹನ ಮಾಡುವ ಬದಲು ದಫನ ಮಾಡಿದ್ದು ಯಾಕೆ?   

ಚೆನ್ನೈ: ದೇವರನ್ನು ನಂಬುವ, ಹಣೆಯಲ್ಲಿ ಅಯ್ಯಂಗಾರ್ ನಾಮ ಧರಿಸುವ 'ಆಸ್ತಿಕ'ರಾಗಿದ್ದ ಜಯಲಲಿತಾ ಅವರ ಪಾರ್ಥಿವ ಶರೀರವನ್ನು ದಹನ ಮಾಡುವ ಬದಲು ದಫನ ಮಾಡಲಾಗಿದೆ.

ಸಾಮಾನ್ಯವಾಗಿ ಅಯ್ಯಂಗಾರ್ ಸಂಪ್ರದಾಯದ ಪ್ರಕಾರ ಪಾರ್ಥಿವ ಶರೀರವನ್ನು ದಹನ ಮಾಡಲಾಗುತ್ತದೆ. ಆದರೆ ಜಯಾ ಅವರ ಆಪ್ತ ಗೆಳತಿ ಶಶಿಕಲಾ ಅವರ ನಿರ್ಧಾರದಂತೆ ಜಯಾ ಮೃತದೇಹವನ್ನು ದಹನದ ಬದಲು ದಫನ ಮಾಡಲಾಗಿದೆ.

ಮರೀನಾ ಬೀಚ್‍ನಲ್ಲಿ ಇಂದು ಸಂಜೆ 6.15ಕ್ಕೆ ಜಯಾ ಅಂತ್ಯ ಸಂಸ್ಕಾರ ನಡೆದಿದ್ದು, ಅಯ್ಯಂಗಾರ್ ಆಗಿರುವ ಜಯಾ ಮೃತದೇಹವನ್ನು ದಫನ ಮಾಡಲು ನಿರ್ಧರಿಸಿರುವುದು ಯಾಕೆ? ಎಂಬುದಕ್ಕೆ ಸರ್ಕಾರದ ಹಿರಿಯ ಕಾರ್ಯದರ್ಶಿಯೊಬ್ಬರು ಉತ್ತರಿಸಿದ್ದಾರೆ.

ADVERTISEMENT

"ಅವರು ನಮ್ಮ ಪಾಲಿಗೆ ಅಯ್ಯಂಗಾರ್ ಆಗಿರಲಿಲ್ಲ. ಅವರು ಜಾತಿ, ಧರ್ಮಗಳಿಂದ ಅತೀತವಾಗಿ ಗುರುತಿಸಿಕೊಂಡವರು. ಪರಿಯಾರ್, ಅಣ್ಣಾ ದೊರೈ, ಎಂಜಿಆರ್ ಮೊದಲಾದ ದ್ರಾವಿಡ ನೇತಾರರಂತೆ ಜಯಾ ಅವರನ್ನೂ ದಫನ ಮಾಡಲಾಗಿದೆ. ಸಾವಿನ ನಂತರ ನಮ್ಮ ನಾಯಕಿಯ ದೇಹ ದಹನವಾಗುವ ಬದಲು ಅಲ್ಲೇ ಉಳಿಯಲಿ" ಎಂದು  ಪನ್ನೀರು ಪೂಸಿ ಮತ್ತು ಶ್ರೀಗಂಧದ ಪೆಟ್ಟಿಗೆಯಲ್ಲಿಟ್ಟು ದಫನ ಮಾಡಲಾಗಿದೆ ಎಂದಿದ್ದಾರೆ.

ಆಕೆ ದೇವರನ್ನು ನಂಬುತ್ತಿದ್ದರು. ಹಾಗಾಗಿ ಅವರ ಪಾರ್ಥಿವ ಶರೀರವನ್ನು ದಹನ ಮಾಡಲಾಗುವುದು ಎಂದು ಜನರು ನಿರೀಕ್ಷಿಸುತ್ತಿದರು. ಆದರೆ ಚಿತೆಗೆ ಅಗ್ನಿ ಸ್ಪರ್ಶ ಮಾಡಲು ರಕ್ತ ಸಂಬಂಧಿಗಳು ಬೇಕು. ಜಯಾ ಅವರಿಗೆ ಇದ್ದ ಏಕೈಕ ರಕ್ತ ಸಂಬಂಧಿ ಎಂದರೆ ದೀಪಾ ಜಯಕುಮಾರ್ (ಜಯಲಲಿತಾ ಅವರ ಅಣ್ಣ ಜಯಕುಮಾರ್ ಪುತ್ರಿ). ಈ ರೀತಿಯ ವಿಧಿವಿಧಾನಗಳಿಗೆ ದೀಪಾ ಅವರಿಗೆ ಅವಕಾಶ ನೀಡಲು ಜಯಾ ಆಪ್ತ  ಗೆಳತಿ ಶಶಿಕಲಾ ಕುಟುಂಬ ಒಪ್ಪುವುದಿಲ್ಲ ಎಂದು ರಾಜಕೀಯ ವಿಶ್ಲೇಷಕರೊಬ್ಬರು ಹೇಳಿದ್ದಾರೆ.

ಬ್ರಿಟನ್ ವಿಶ್ವವಿದ್ಯಾನಿಲಯದಲ್ಲಿ ಮಾಧ್ಯಮ ಮತ್ತು ಸಂವಹನ ರಿಸರ್ಚರ್ ಆಗಿರುವ ದೀಪಾ, ಜಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಭೇಟಿ ಮಾಡಲು ಬಂದಿದ್ದರೂ ಅವರಿಗೆ ಭೇಟಿ ಮಾಡುವ ಅವಕಾಶ ನೀಡಿರಲಿಲ್ಲ. ಅಪೋಲೋ ಆಸ್ಪತ್ರೆ ಗೇಟ್ ಬಳಿ ದೀಪಾ ಮತ್ತು ಆಕೆಯ ಪತಿಯನ್ನು ಪೊಲೀಸರು ಬಲವಂತವಾಗಿ ಹೊರದೂಡಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಅಷ್ಟೇ ಅಲ್ಲದೆ, ನಿನ್ನೆ ವಿಧಿವಶರಾದ ಜಯಾ ಅವರ ಅಂತಿಮ ದರ್ಶನಕ್ಕೂ ದೀಪಾ ಅವರಿಗೆ ಅವಕಾಶ ನೀಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.