ADVERTISEMENT

ಅರಣ್ಯ ರಕ್ಷಣೆಗೆ ‘ಲೇಡಿ ಟಾರ್ಜನ್‌’

ಮಾಫಿಯಾ ವಿರುದ್ಧ ಜಾರ್ಖಂಡ್‌ ಮಹಿಳೆ ಸಂಘಟಿತ ಹೋರಾಟ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2017, 19:30 IST
Last Updated 12 ನವೆಂಬರ್ 2017, 19:30 IST
ಅರಣ್ಯ ರಕ್ಷಣೆಗೆ ‘ಲೇಡಿ ಟಾರ್ಜನ್‌’
ಅರಣ್ಯ ರಕ್ಷಣೆಗೆ ‘ಲೇಡಿ ಟಾರ್ಜನ್‌’   

ನವದೆಹಲಿ : ‘ಮರಗಳಿಲ್ಲದ ದೇಶದ ಭವಿಷ್ಯ ಅರ್ಥಹೀನ’ ಎಂದು ಅಮೆರಿಕದ 26ನೇ ಅಧ್ಯಕ್ಷ ಥಿಯೊಡೊರ್‌ ರೂಸ್‌ವೆಲ್ಟ್‌ ಹೇಳಿದ್ದರು. ಹೀಗೆ ರೂಸ್‌ವೆಲ್ಟ್‌ ಅವರು ಹೇಳಿ ಒಂದು ದಶಕಕ್ಕೂ ಹೆಚ್ಚು ಕಾಲ ಕಳೆದ ನಂತರ, ಅದೂ 13,000 ಕಿ.ಮೀ.ಗೂ ಹೆಚ್ಚು ದೂರದಲ್ಲಿರುವ ಭಾರತದಲ್ಲಿ ಈ ಮಾತಿಗೆ ಸಾಕ್ಷಿಯಾಗುವಂತಹ ಸಾಧನೆ ಮಾಡಿದ್ದಾರೆ ‘ಲೇಡಿ ಟಾರ್ಜನ್‌’ ಎಂದೇ ಹೆಸರಾಗಿರುವ ಜಾರ್ಖಂಡ್‌ನ ಮಹಿಳೆ 37 ವರ್ಷದ ಜಮುನಾ ತುಡು.

ಒಡಿಶಾದಲ್ಲಿ ಜನಿಸಿ ಜಾರ್ಖಂಡ್‌ನ ಪೂರ್ವ ಸಿಂಗ್‌ಭುಮ್‌ ಜಿಲ್ಲೆಯ ಮುತುರ್ಖಮ್‌ ಗ್ರಾಮದ ಯುವಕನನ್ನು ವರಿಸಿದ ತುಡು, ಮಾಫಿಯಾಗಳ ಕೈಗೆ ಸಿಲುಕಿ ನಾಶವಾಗುತ್ತಿದ್ದ ಈ ಗ್ರಾಮದ ಸುತ್ತಮುತ್ತಲಿನ ಅರಣ್ಯ ರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಮರಗಳನ್ನು ಸಹೋದರರಂತೆ ಕಾಣುವ ಅವರು ಪ್ರತಿವರ್ಷ ರಕ್ಷಾ ಬಂಧನ ಹಬ್ಬದಂದು ಅವುಗಳಿಗೆ ರಾಖಿ ಕಟ್ಟುತ್ತಾರೆ.

’ಎನ್‌ಜೆಂಡರ್‌ ಡೈಲಾಗ್ಸ್‌... ವಿಮೆನ್‌ ಚೇಂಜಿಂಗ್‌ ದಿ ವರ್ಲ್ಡ್‌’ ವಿಷಯದ ಕುರಿತು ಇಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕಟ್ಟಿಗೆ ತರಲು ಕಾಡಿಗೆ ಓಡುತ್ತಿದ್ದವರಲ್ಲಿ ತಾವೂ ಒಬ್ಬರಾಗಿದ್ದ ದಿನಗಳಿಂದ ಹಿಡಿದು, ಅದೇ ಕಾಡನ್ನು ರಕ್ಷಿಸಲು ತಾವು ಪಟ್ಟ ಹರಸಾಹಸದವರೆಗಿನ ಕಥೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ADVERTISEMENT

ಗ್ರಾಮವನ್ನು ಸುತ್ತುವರಿದಿರುವ ಸುಮಾರು 50 ಹೆಕ್ಟೇರ್‌ ಅರಣ್ಯವನ್ನು ಗ್ರಾಮಸ್ಥರೊಂದಿಗೆ ಸೇರಿ ಬಿಲ್ಲು, ಬಾಣಗಳನ್ನು ಹಿಡಿದು ಮಾಫಿಯಾ ಮತ್ತು ಕಳ್ಳರ ಕಪಿಮುಷ್ಟಿಯಿಂದ ರಕ್ಷಿಸಲು ಯಶಸ್ವಿಯಾಗಿರುವ ತುಡು ’ಅರಣ್ಯವಿರದ ಪ್ರದೇಶಗಳನ್ನು ನಾನು ನೋಡಲು ಇಷ್ಟಪಡುವುದಿಲ್ಲ’ ಎನ್ನುತ್ತಾರೆ.

1998ರಲ್ಲಿ ಐವರು ಮಹಿಳೆಯರನ್ನೊಳಗೊಂಡ ವನ ಸುರಕ್ಷಾ ಸಮಿತಿಯನ್ನು ತುಡು ರಚನೆ ಮಾಡಿದಾಗ ಗ್ರಾಮಸ್ಥರೇ ಮೊದಲು ವಿರೋಧ ವ್ಯಕ್ತಪಡಿಸಿದ್ದರು. ಉರುವಲು ಕಟ್ಟಿಗೆಯ ಮೂಲವಾದ ಅರಣ್ಯವನ್ನು ರಕ್ಷಿಸುವ ಉಸಾಬರಿ ನಿನಗೇಕೆ ಎಂದು ಪ್ರಶ್ನಿಸುತ್ತಿದ್ದರು. ಮರದ ಸಣ್ಣ ರೆಂಬೆಗಳನ್ನು ಮಾತ್ರ ಉರುವಲಿಗೆ ಬಳಸಿ, ದೊಡ್ಡವನ್ನು ಬಿಟ್ಟು ಬಿಡಿ ಎಂದು ಗ್ರಾಮಸ್ಥರ ಮನವೊಲಿಸಲು ಯಶಸ್ವಿಯಾದ ತುಡು ಈಗ ಅಂತಹ 300 ಗುಂಪುಗಳನ್ನು ರಚಿಸಿದ್ದಾರೆ. ಒದೊಂದು ಗುಂಪಿನಲ್ಲೂ 30 ಜನ ಇದ್ದಾರೆ.

ಅರಣ್ಯ ಮಾಫಿಯಾ ಮತ್ತು ಕಳ್ಳರ ವಿರುದ್ಧ ಅನೇಕ ಎಫ್‌ಐಆರ್‌ಗಳನ್ನು ದಾಖಲಿಸಿರುವ ಸಮಿತಿಯು ಅರಣ್ಯ ರಕ್ಷಣೆಗಾಗಿ ಜಾರ್ಖಂಡ್‌ ಪೊಲೀಸರೊಂದಿಗೆ ಕೈಜೋಡಿಸಿದೆ.

ಎಂದಿನಂತೆ, ತುಡು ಮಾಡುತ್ತಿರುವ ಸಾಮಾಜಿಕ ಕಾರ್ಯವನ್ನು ಸಹಿಸಲು ಮಾಫಿಯಾಗಳಿಗೆ ಸಾಧ್ಯವಾಗಲಿಲ್ಲ. ಅನೇಕ ಬೆದರಿಕೆ ಕರೆಗಳು ಅವರಿಗೆ ಬಂದವು. ಅವರ ಮನೆ ಲೂಟಿ ಮಾಡಿದರು. ರೈಲು ನಿಲ್ದಾಣವೊಂದರ ಬಳಿ ಅವರ ಮೇಲೆ ಮಾರಣಾಂತಿಕ ಹಲ್ಲೆಯೂ ನಡೆದಿತ್ತು. ಆದರೆ ಅದಕ್ಕೆಲ್ಲ ಹೆದರದ ತುಡು ತಮ್ಮ ಮಹಾತ್ವಾಕಾಂಕ್ಷೆಯ ಕಾರ್ಯವನ್ನು ಮುಂದುವರಿಸಿದರು.

‘ನಮ್ಮ ಕೊನೆಯುಸಿರಿರುವವರೆಗೂ ನಾವು ಅರಣ್ಯ ರಕ್ಷಣೆಗೆ ಹೋರಾಡುತ್ತೇವೆ’ ಎನ್ನುತ್ತಾರೆ ಅವರು.

ವನ ಸುರಕ್ಷಾ ಸಮಿತಿಯ ಸೇವೆಯು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯ ಸರ್ಕಾರ ಮುತುರ್ಖಮ್‌ ಗ್ರಾಮವನ್ನು ದತ್ತು ಪಡೆದುಕೊಂಡಿದ್ದು, ಗ್ರಾಮಕ್ಕೆ ನೀರು ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಿದೆ. ತುಡು ಅವರ ಕಥೆ ಕೇವಲ ಸಹೋದರತ್ವ ಮತ್ತು ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದಷ್ಟೇ ಅಲ್ಲ, ಸ್ಥಿರ ಅಭಿವೃದ್ಧಿಗೂ ಒಂದು ಪಾಠವಾಗಿದೆ.

ಭಾರತ ಮತ್ತು ಅಮೆರಿಕದ ಜಾಗತಿಕ ಉದ್ಯಮ ಶೃಂಗಸಭೆಯ ಭಾಗವಾಗಿ ನೀತಿ ಆಯೋಗವು ಈ ವಿಚಾರ ಸಂಕಿರಣವನ್ನು ಆಯೋಜಿಸಿತ್ತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.