ADVERTISEMENT

‘ಅವಧಿಗೂ ಮುನ್ನ ಸಂಜಯ್ ದತ್ ಬಿಡುಗಡೆ ಮಾಡಿದ್ದೇಕೆ?’

ಪಿಟಿಐ
Published 12 ಜೂನ್ 2017, 12:52 IST
Last Updated 12 ಜೂನ್ 2017, 12:52 IST
ಸಂಜಯ್ ದತ್ (ಸಾಂದರ್ಭಿಕ ಚಿತ್ರ)
ಸಂಜಯ್ ದತ್ (ಸಾಂದರ್ಭಿಕ ಚಿತ್ರ)   

ಮುಂಬೈ: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಅಪರಾಧದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ನಟ ಸಂಜಯ್ ದತ್ ಅವರನ್ನು ಅವಧಿಗೂ ಮುನ್ನ ಬಿಡುಗಡೆ ಮಾಡಿರುವುದನ್ನು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ. ಜತೆಗೆ, ಈ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ಸಲ್ಲಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಪುಣೆಯ ನಿವಾಸಿ ಪ್ರದೀಪ್ ಭಾಲೆಕರ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ದತ್ ನಡವಳಿಕೆ ಉತ್ತಮ ಎಂದು ಅಧಿಕಾರಿಗಳು ಹೇಗೆ ನಿರ್ಧರಿಸಿದ್ದರು ಎಂದು ಪ್ರಶ್ನಿಸಿದೆ. ಒಂದು ವಾರದ ನಂತರ ಮುಂದಿನ ವಿಚಾರಣೆ ನಡೆಸುವುದಾಗಿ ಕೋರ್ಟ್ ತಿಳಿಸಿದೆ.

ಪುಣೆಯ ಯೆರವಾಡ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ದತ್ ಅವರನ್ನು 2016ರ ಫೆಬ್ರುವರಿಯಲ್ಲಿ, ಶಿಕ್ಷೆಯ ಅವಧಿ ಪೂರ್ಣಗೊಳ್ಳಲು ಎಂಟು ತಿಂಗಳು ಬಾಕಿ ಇರುವಾಗಲೇ ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಮಾಡಲಾಗಿತ್ತು.

ADVERTISEMENT

ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಸಾಬೀತಾದ್ದರಿಂದ ಮುಂಬೈನ ಟಾಡಾ ನ್ಯಾಯಾಲಯ ದತ್ ಅವರಿಗೆ ಆರು ವರ್ಷಗಳ ಕಠಿಣ ಸಜೆ ಮತ್ತು ₹ 25,000 ದಂಡ ವಿಧಿಸಿ 2007ರ ಜುಲೈ 31ರಂದು ತೀರ್ಪು ನೀಡಿತ್ತು. ಇದರ ವಿರುದ್ಧ ದತ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ 2013ರಲ್ಲಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಆದರೆ, ಶಿಕ್ಷೆಯ ಅವಧಿಯನ್ನು 5 ವರ್ಷಗಳಿಗೆ ಇಳಿಕೆ ಮಾಡಿತ್ತು. ಶಿಕ್ಷೆ ಅನುಭವಿಸುತ್ತಿದ್ದಾಗ, 2013ರಲ್ಲಿ ದತ್‌ಗೆ 90 ದಿನಗಳ ಪೆರೋಲ್ ನೀಡಲಾಗಿತ್ತು. ನಂತರ ಅದನ್ನು 30 ದಿನ ವಿಸ್ತರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.