ADVERTISEMENT

ಅಸೀಮಾನಂದ ಹೇಳಿಕೆ ಸೋರಿಕೆ:ಸಿಬಿಐ ಉತ್ತರಕ್ಕೆ ಕೋರ್ಟ್ ಅತೃಪ್ತಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 18:10 IST
Last Updated 15 ಫೆಬ್ರುವರಿ 2011, 18:10 IST

ನವದೆಹಲಿ (ಪಿಟಿಐ): ಅಜ್ಮೇರ್ ದರ್ಗಾ ಸ್ಫೋಟದ ಆರೋಪಿ ಸ್ವಾಮಿ ಅಸೀಮಾನಂದ ಅವರ ತಪ್ಪೊಪ್ಪಿಗೆ ಹೇಳಿಕೆಯನ್ನು ತಾನು ಸೋರಿಕೆ ಮಾಡಿ ಲ್ಲವೆಂದು ಹೇಳಿ ಸಿಬಿಐ ಸಲ್ಲಿಸಿದ ಎರಡು ಪುಟಗಳ ಉತ್ತರಕ್ಕೆ ಅತೃಪ್ತಿ ವ್ಯಕ್ತಪಡಿಸಿದ ದೆಹಲಿ ನ್ಯಾಯಾಲಯ, ಫೆ.25ರೊಳಗೆ ಹೊಸದಾಗಿ ಪೂರ್ಣ ವರದಿ ಸಲ್ಲಿಸಲು ಸೂಚಿಸಿದೆ.

‘ಇದು ಪೂರ್ಣ ವರದಿ ಅಲ್ಲ. ಈ ವರದಿಗೆ ಸಿಬಿಐ ನಿರ್ದೇಶಕರು ಸಹಿಯನ್ನೂ ಹಾಕಿಲ್ಲ’ ಎಂದು ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಧೀಶ ಸಂಜಯ್ ಬನ್ಸಾಲ್ ಮಂಗಳವಾರ ಹೇಳಿದರು.

ಫೆ.4ರಂದು ಸಿಬಿಐಗೆ ನೋಟಿಸ್ ಜಾರಿಗೊಳಿದ್ದ ನ್ಯಾಯಾಲಯ, ಅಸೀಮಾನಂದ ನೀಡಿದ ತಪ್ಪೊಪ್ಪಿಗೆ ಹೇಳಿಕೆ ಮಾಧ್ಯಮಗಳಿಗೆ ಸೋರಿಕೆಯಾದುದು ಹೇಗೆ ಎಂದು ಕೇಳಿತ್ತು. 

 ದೆಹಲಿಯ ಮೆಟ್ರೊಪಾಲಿಟನ್ ನ್ಯಾಯಾಲಯವೊಂದರಲ್ಲಿ ಗೋಪ್ಯವಾಗಿ ಡಿ.18ರಂದು ಅಸೀಮಾನಂದ ಅವರ ವಿಚಾರಣೆ ನಡೆದಿದ್ದಾಗ ಅವರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಅವರ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿಯೇ ಸೋರಿಕೆ ಮಾಡಲಾಗಿದೆ ಎಂದು ದೂರಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ದೇವೇಂದ್ರ ಗುಪ್ತಾ, ಸಿಬಿಐ ವಿರುದ್ಧ ಪ್ರಥಮ ಮಾಹಿತಿ ವರದಿ ಸಲ್ಲಿಸಲು ಒತ್ತಾಯಿಸಿದ್ದರು. ಅಜ್ಮೇರ್ ಸ್ಫೋಟ ಪ್ರಕರಣದಲ್ಲಿ ಗುಪ್ತಾ ಅವರೂ ಮತ್ತೊಬ್ಬ ಆರೋಪಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.