ADVERTISEMENT

ಅಸ್ಸಾಂಗೆ ರೂ 500 ಕೋಟಿ ಪ್ಯಾಕೇಜ್

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 19:30 IST
Last Updated 2 ಜುಲೈ 2012, 19:30 IST
ಅಸ್ಸಾಂಗೆ ರೂ 500 ಕೋಟಿ ಪ್ಯಾಕೇಜ್
ಅಸ್ಸಾಂಗೆ ರೂ 500 ಕೋಟಿ ಪ್ಯಾಕೇಜ್   

ಗುವಾಹಟಿ (ಪಿಟಿಐ): ಭಾರಿ ಮಳೆ ಹಾಗೂ ಪ್ರವಾಹದಿಂದ ಅಪಾರ ಪ್ರಮಾಣದ ಹಾನಿಗೆ ಒಳಗಾಗಿರುವ ಅಸ್ಸಾಂಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು 500 ಕೋಟಿ ರೂಪಾಯಿ ಪರಿಹಾರ ಕೊಡುಗೆ ಪ್ರಕಟಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಾದ ಜೋರಾತ್, ದಿಮಜಿ ಮತ್ತು ದಕ್ಷಿಣ ದಿನಾಜಪುರಗಳಲ್ಲಿ ಪ್ರಧಾನಿ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸೋಮವಾರ ವೈಮಾನಿಕ ಸಮೀಕ್ಷೆ ನಡೆಸಿದರು. ವ್ಯಾಪಕ ಪ್ರಮಾಣದಲ್ಲಿ ಜೀವ ಹಾಗೂ ಆಸ್ತಿ ಹಾನಿಯಾಗಿರುವುದಾಗಿ ಹೇಳಿದ್ದಾರೆ.

ಪ್ರವಾಹ ಹಾಗೂ ಭೂ ಕುಸಿತದಿಂದ ಇದುವರೆಗೆ 77 ಮಂದಿ ಮೃತಪಟ್ಟಿದ್ದು, ಐದು ಲಕ್ಷಕ್ಕೂ ಅಧಿಕ ಮಂದಿ  ನಿರ್ವಸಿತರಾಗಿದ್ದಾರೆ. ಮೃತಪಟ್ಟವರ ಕುಟುಂಬದವರಿಗೆ ತಲಾ ಒಂದು ಲಕ್ಷ ಪರಿಹಾರವನ್ನು ಈ ಸಂದರ್ಭದಲ್ಲಿ ಘೋಷಿಸಿದರು. 

ಆದಷ್ಟು ಶೀಘ್ರವಾಗಿ ಪರಿಹಾರ ಕಾಮಗಾರಿ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ 640 ರಕ್ಷಣಾ ಕಾರ್ಯಕರ್ತರು, ಹೆಚ್ಚುವರಿಯಾಗಿ 752 ಯೋಧರು ಮತ್ತು 71 ಬೋಟ್‌ಗಳನ್ನು ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ನಿಯೋಜಿಸಲಾಗಿದೆ.

ಪರಿಹಾರ ಕಾರ್ಯಕರ್ತರು ಇಲ್ಲಿಯವರೆಗೆ 20 ಟನ್ ಪರಿಹಾರ ಸಾಮಗ್ರಿಗಳನ್ನು ಹೆಲಿಕಾಪ್ಟರ್‌ಗಳ ಮೂಲಕ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಿತರಿಸಿದ್ದಾರೆ ಎಂದು ಪ್ರಧಾನಿ ತಿಳಿಸಿದರು.

ರಾಜ್ಯದಾದ್ಯಂತ 768 ನಿರಾಶ್ರಿತರ ಶಿಬಿರಗಳಲ್ಲಿ 4.84 ಲಕ್ಷ ಮಂದಿ ಆಶ್ರಯ ಪಡೆದಿದ್ದಾರೆ. ಸಾಕಷ್ಟು ಆಹಾರ ಧಾನ್ಯಗಳು ರಾಜ್ಯ ಸರ್ಕಾರದ ಉಗ್ರಾಣದಲ್ಲಿದ್ದು, ರಾಜ್ಯದಿಂದ ಮತ್ತಷ್ಟು ಕೋರಿಕೆ ಬಂದರೆ ಕೇಂದ್ರ ಸರಬರಾಜು ಮಾಡುವುದಾಗಿ ಸಿಂಗ್ ಹೇಳಿದರು.
 
ಬರಾಕ್ ಕಣಿವೆ ಪ್ರದೇಶ, ತ್ರಿಪುರಾ ಹಾಗೂ ಮಿಜೋರಾಂನಲ್ಲಿ ಹಾನಿಗೊಂಡಿರುವ ರೈಲು ಹಳಿಗಳನ್ನು ಅದಷ್ಟು ಬೇಗ ಸರಿಪಡಿಸುವಂತೆ ರೈಲ್ವೆ ಸಚಿವಾಲಯಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.