ADVERTISEMENT

ಅಸ್ಸಾಂ ಪ್ರವಾಹಕ್ಕೆ 77 ಬಲಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 19:30 IST
Last Updated 1 ಜುಲೈ 2012, 19:30 IST

ಗುವಾಹಟಿ (ಪಿಟಿಐ): ಸತತ ಮಳೆಯಿಂದಾಗಿ ಅಸ್ಸಾಂನಲ್ಲಿ ಉಂಟಾಗಿರುವ ಪ್ರವಾಹ ಮತ್ತು ಭೂ ಕುಸಿತದಿಂದಾಗಿ ಇದುವರೆಗೂ 77 ಮಂದಿ ಸತ್ತಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.

ವಿಶೇಷ ವಿಮಾನದಲ್ಲಿ ಪ್ರಧಾನಿ ಸಿಂಗ್ ಮತ್ತು ಸೋನಿಯಾ ಅವರು ಇಲ್ಲಿನ ಜೋರತ್‌ಗೆ ಬಂದಿಳಿಯುವ ಸಾಧ್ಯತೆಯಿದ್ದು, ಪ್ರವಾಹದಿಂದಾಗಿ ಅತಿ ಹೆಚ್ಚು ಹಾನಿಗೊಂಡಿರುವ ಮಜುಲಿ  ಪ್ರದೇಶದಲ್ಲಿ ವೈಮಾನಿಕ ವೀಕ್ಷಣೆ ನಡೆಸಲಿದ್ದಾರೆ.

 ಅಲ್ಲದೆ, ವೀಕ್ಷಣೆ ಮುಗಿಸಿ ದೆಹಲಿಗೆ ವಾಪಸಾಗುವ ಮುನ್ನ ಗುವಾಹಟಿಯಲ್ಲಿ ರಾಜ್ಯದ ಸಚಿವರುಗಳು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರವಾಹಕ್ಕೆ ಸಿಲುಕಿ 61 ಮತ್ತು ಭೂ ಕುಸಿತದಲ್ಲಿ 16 ಮಂದಿ ಜೀವ ತೆತ್ತಿದ್ದು, ಆರು ಮಂದಿ ಕಾಣೆಯಾಗಿದ್ದಾರೆ. ರಾಜ್ಯದ ಎಲ್ಲಾ 27 ಜಿಲ್ಲೆಗಳು ಪ್ರವಾಹದಿಂದ ಹಾನಿಗೀಡಾಗಿದ್ದು, ಮೂರು ಜಿಲ್ಲೆಗಳಲ್ಲಿ ಭೂ ಕುಸಿತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ನದಿಗಳಾದ ಬ್ರಹ್ಮಪುತ್ರ ಮತ್ತು ಕಪಿಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪ್ರವಾಹದಿಂದಾಗಿ ರಾಜ್ಯದಾದ್ಯಂತ 2,166 ಹಳ್ಳಿಗಳು ಹಾನಿಗೊಳಗಾಗಿದ್ದು, ಒಟ್ಟು 19.37 ಲಕ್ಷ ಮಂದಿ ಪ್ರವಾಹದ ತೊಂದರೆಗೆ ಸಿಲುಕಿದ್ದಾರೆ ಎಂದು ಸರ್ಕಾರದ ವರದಿ ತಿಳಿಸಿದೆ.

ಈ ಮಧ್ಯೆ ರಾಷ್ಟ್ರೀಯ ವಿಕೋಪ ಪರಿಹಾರ ಪಡೆ ಮತ್ತು ಸೇನಾ ಸಿಬ್ಬಂದಿಯನ್ನು ಪ್ರವಾಹ ಪೀಡಿತ 16 ಪ್ರದೇಶಗಳಿಗೆ ನಿಯೋಜಿಸಲಾಗಿದೆ. ಒಂಬತ್ತು ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.

ಅರುಣಾಚಲದಲ್ಲಿ ಇಳಿಮುಖ
ಇಟಾನಗರ (ಪಿಟಿಐ):
ರಾಜ್ಯದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿಯನ್ನೆದುರಿಸುತ್ತಿದ್ದ ಅರುಣಾಚಲ ಪ್ರದೇಶ, ಕಳೆದ ಎರಡು ದಿನಗಳಿಂದ ಹವಾಮಾನದ್ಲ್ಲಲಿ ಆದ ಬದಲಾವಣೆಗಳಿಂದಾಗಿ ಸಾಮಾನ್ಯ ಸ್ಥಿತಿಗೆ ಮರಳಿದೆ.

ಈ ಮಧ್ಯೆ ರಾಜ್ಯದ ಮುಖ್ಯಮಂತ್ರಿ ನಬಮ್ ತುಕಿ ಅವರು, ರಾಜ್ಯದಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ನೂರಾರು ಮಂದಿ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಪ್ರವಾಹದಿಂದಾಗಿ ರಾಜ್ಯದಲ್ಲಿ ಉಂಟಾಗಿರುವ ಹಾನಿಯ ಅಧ್ಯಯನಕ್ಕಾಗಿ ಕೇಂದ್ರದಿಂದ ಅಧಿಕಾರಿಗಳ ತಂಡವನ್ನು ರಾಜ್ಯಕ್ಕೆ ಕಳುಹಿಸಬೇಕೆಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರಿಗೆ ಮನವಿ ಮಾಡಿದ್ದಾರೆ.

`ಈಗಾಗಲೇ ರಾಜ್ಯವು ಭಾರತೀಯ ಸೇನಾಪಡೆ ಮತ್ತು ವಾಯುಪಡೆಯ ಸಹಕಾರದೊಂದಿಗೆ ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದೆ. ಅಲ್ಲದೆ, ಅತಿಯಾದ ಮಳೆಯಿಂದಾಗಿ ರಾಜಧಾನಿ ಇಟಾನಗರದಲ್ಲಿಯೂ ಜನಜೀವನ ಅಸ್ತವ್ಯಸ್ತಗೊಂಡಿದೆ~ ಎಂದು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT