ADVERTISEMENT

ಆಂಧ್ರಪ್ರದೇಶ ಉಪಚುನಾವಣೆ ಕಾಂಗ್ರೆಸ್ ದೂಳೀಪಟ

​ಪ್ರಜಾವಾಣಿ ವಾರ್ತೆ
Published 15 ಜೂನ್ 2012, 19:30 IST
Last Updated 15 ಜೂನ್ 2012, 19:30 IST
ಆಂಧ್ರಪ್ರದೇಶ ಉಪಚುನಾವಣೆ ಕಾಂಗ್ರೆಸ್ ದೂಳೀಪಟ
ಆಂಧ್ರಪ್ರದೇಶ ಉಪಚುನಾವಣೆ ಕಾಂಗ್ರೆಸ್ ದೂಳೀಪಟ   

ಹೈದರಾಬಾದ್ (ಐಎಎನ್‌ಎಸ್): ನಿರೀಕ್ಷೆಯಂತೆ ಆಂಧ್ರಪ್ರದೇಶದ ಉಪ ಚುನಾವಣೆಯಲ್ಲಿ ವೈಎಸ್‌ಆರ್ ಕಾಂಗ್ರೆಸ್‌ಗೆ ಭರ್ಜರಿ ಜಯ ಸಿಕ್ಕಿದ್ದು ಪಕ್ಷದ ನಾಯಕ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಜನಪ್ರಿಯತೆ ಸಾಬೀತಾಗಿದೆ.

ಚುನಾವಣೆ ನಡೆದ 18 ವಿಧಾನಸಭಾ ಕ್ಷೇತ್ರಗಳಲ್ಲಿ 15 ಸ್ಥಾನಗಳನ್ನು ಗೆದ್ದುಕೊಂಡಿರುವ ವೈಎಸ್‌ಆರ್ ಕಾಂಗ್ರೆಸ್ ನೆಲ್ಲೂರು ಲೋಕಸಭಾ ಕ್ಷೇತ್ರದಲ್ಲೂ ಗರಿಷ್ಠ ಮತಗಳ ಅಂತರದ ಜಯ ಸಾಧಿಸಿದೆ.

ರಾಜ್ಯದ 12 ಜಿಲ್ಲೆಗಳಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಒಟ್ಟಾರೆ  ಶೇ 70 ರಷ್ಟು ಮತದಾನವಾಗಿತ್ತು. ನೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ವೈಎಸ್‌ಆರ್ ಕಾಂಗ್ರೆಸ್‌ನ ಎಂ. ರಾಜಮೋಹನ ರೆಡ್ಡಿ ಸಮೀಪದ ಸ್ಪರ್ಧಿ ಕಾಂಗ್ರೆಸ್‌ನ ಟಿ. ಸುಬ್ಬಿರಾಮಿ ರೆಡ್ಡಿ ಅವರನ್ನು 2.91 ಲಕ್ಷ ಮತಗಳಿಗೂ ಅಧಿಕ ಅಂತರದಿಂದ ಪರಾಭವ ಗೊಳಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ 2 ಹಾಗೂ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಒಂದು ಕ್ಷೇತ್ರದಲ್ಲಿ ಮಾತ್ರ ಜಯ ಗಳಿಸಿದೆ.

ವಿರೋಧ ಪಕ್ಷ ತೆಲುಗು ದೇಶಂ (ಟಿಡಿಪಿ) ಯಾವ ಕ್ಷೇತ್ರದಲ್ಲೂ ಜಯಗಳಿಸಲು ಸಾಧ್ಯವಾಗದೆ ಮುಖಭಂಗ ಅನುಭವಿಸಿದೆ.

ಅಕ್ರಮ ಆಸ್ತಿ ಆರೋಪದಡಿ ಸದ್ಯ ಸಿಬಿಐ ಬಂಧನದಲ್ಲಿರುವ ವೈ.ಎಸ್. ಜಗನ್‌ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿ ಅಭ್ಯರ್ಥಿಗಳ ಪರ ಎಲ್ಲ ಕ್ಷೇತ್ರಗಳಲ್ಲಿ ಅನುಕಂಪದ ಅಲೆ ಕಂಡು ಬಂದಿದೆ.

ಉಪ ಚುನಾವಣೆ ಫಲಿತಾಂಶದಿಂದ ಆಡಳಿತಾರೂಢ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿದ್ದು ವೈಎಸ್‌ಆರ್ ಜನಪ್ರಿಯತೆಯಿಂದ ದಿಗಿಲುಗೊಂಡಿರುವ ಕಿರಣಕುಮಾರ ರೆಡ್ಡಿ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯುಂಟಾಗಬಹುದಾಗಿದೆ ಎಂದು ವಿಶ್ಲೇಷಿಸಲಾಗಿದೆ.

ತ್ರಿಪುರಾದಲ್ಲಿ ಆಡಳಿತಾರೂಢ ಸಿಪಿಎಂ ನಲ್ಚಾಚಾರ್ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಂಡಿದ್ದು ಇಲ್ಲಿ ತಪನ್ ಚಂದ್ರ ದಾಸ್ ಜಯಗಳಿಸಿದ್ದಾರೆ. ಈ ಕ್ಷೇತ್ರದಲ್ಲಿ ದಾಖಲೆಯ ಶೇ 95.93 ಮತದಾನವಾಗಿತ್ತು.

ಜಾರ್ಖಂಡ್‌ನ ಹತಿಯಾ ವಿಧಾನಸಭಾ ಕ್ಷೇತ್ರದಲ್ಲಿ ಅಖಿಲ ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟದ (ಎಜೆಎಸ್‌ಯು) ಅಭ್ಯರ್ಥಿ ನವೀನ್ ಜೈಸ್ವಾಲ್ ಜಯ ಗಳಿಸಿದ್ದಾರೆ.

ಪ್ರಮುಖ ವಿರೋಧಪಕ್ಷ ಕಾಂಗ್ರೆಸ್ ಇಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದು ನಾಲ್ಕನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದೆ. ಕೇಂದ್ರ ಸಚಿವ ಸುಬೋಧ್ ಕಾಂತ್ ಸಹಾಯ್ ಸಹೋದರ ಸುನಿಲ್ ಸಹಾಯ್ ಕಾಂಗ್ರೆಸ್‌ನಿಂದ ಇಲ್ಲಿ ಸ್ಪರ್ಧಿಸಿದ್ದರು.

ಕೇರಳದ ನೆಯ್ಯಾಟಿಂಕರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿ ಆರ್. ಸೆಲ್ವರಾಜ್ ಎಲ್‌ಡಿಎಫ್ ಅಭ್ಯರ್ಥಿ  ಪರಾಭವಗೊಳಿಸಿದ್ದಾರೆ.

ತಮಿಳುನಾಡಿನ ಪುದುಕೊಟ್ಟಾಯ್ ಕ್ಷೇತ್ರವನ್ನು ಆಡಳಿತಾರೂಢ ಎಐಎಡಿಎಂಕೆ ಉಳಿಸಿಕೊಂಡಿದ್ದರೆ ಪಶ್ಚಿಮಬಂಗಾಳದಲ್ಲೂ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ದಾಸಪುರ್ ಹಾಗೂ ಬಂಕುರಾ ಕ್ಷೇತ್ರದಲ್ಲಿ ಜಯ ಗಳಿಸಿದೆ.

ಉತ್ತರಪ್ರದೇಶದ ಮತ್ ಕ್ಷೇತ್ರದಲ್ಲೂ ಟಿಎಂಸಿ ತನ್ನ ಪ್ರಭುತ್ವ ಸಾಧಿಸಿದೆ. ಮಹಾರಾಷ್ಟ್ರದ ಕೇಜ್ ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಸಿಪಿ ಅಭ್ಯರ್ಥಿ ಪೃಥ್ವಿರಾಜ್ ಸಾಠೆ ಗೆಲುವು ಸಾಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.