ADVERTISEMENT

ಆಂಧ್ರ ಬಿಕ್ಕಟ್ಟಿಗೆ 6 ಸೂತ್ರ

​ಪ್ರಜಾವಾಣಿ ವಾರ್ತೆ
Published 7 ಜನವರಿ 2011, 6:35 IST
Last Updated 7 ಜನವರಿ 2011, 6:35 IST

ನವದೆಹಲಿ (ಪಿಟಿಐ/ಐಎಎನ್‌ಎಸ್):  ತೆಲಂಗಾಣ ವಿವಾದದ ಇತ್ಯರ್ಥಕ್ಕಾಗಿ ಸಂಯುಕ್ತ ಆಂಧ್ರಪ್ರದೇಶ ಮತ್ತು ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಸೇರಿದಂತೆ ಆರು ಅಂಶಗಳ ಪರಿಹಾರ ಸೂತ್ರಗಳನ್ನು ಶಿಫಾರಸು ಮಾಡಿರುವ ನ್ಯಾಯಮೂರ್ತಿ ಶ್ರೀಕೃಷ್ಣ ಸಮಿತಿಯ ವರದಿಯನ್ನು ಕೇಂದ್ರ ಸರ್ಕಾರ ಗುರುವಾರ ಬಿಡುಗಡೆ ಮಾಡಿದ್ದು, ವಿವರವನ್ನು ಗೃಹ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ನೇತೃತ್ವದಲ್ಲಿ ರಚಿಸಲಾದ ಐವರು ಸದಸ್ಯರ ಸಮಿತಿಯು ಸುಮಾರು 11 ತಿಂಗಳ ಕಾಲ ಆಂಧ್ರಪ್ರದೇಶದಲ್ಲಿ ಅಧ್ಯಯನ, ಸಮೀಕ್ಷೆ ಮತ್ತು ಸಮಾಲೋಚನಾ ಪ್ರಕ್ರಿಯೆ ನಡೆಸಿದ ನಂತರ 461 ಪುಟಗಳ ಈ ವರದಿಯನ್ನು ತಯಾರಿಸಿ, ವಾರದ ಹಿಂದೆ ಕೇಂದ್ರಕ್ಕೆ ಸಲ್ಲಿಸಿತ್ತು.

ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ. ಎನ್. ಶ್ರೀಕೃಷ್ಣ ಸಮಿತಿಯು ಸಲ್ಲಿಸಿರುವ ವರದಿಗೆ ವಿರೋಧ ವ್ಯಕ್ತಪಡಿಸಿ ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ವಿದ್ಯಾರ್ಥಿಗಳು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸಿಗೆ ಬೆಂಕಿ ಹಚ್ಚಿದರು.



ಪಕ್ಷಗಳ ಜತೆ ಸಚಿವರ ಸಭೆ: ಟಿಆರ್‌ಎಸ್, ಟಿಡಿಪಿ ಹಾಗೂ ಬಿಜೆಪಿಯ ಬಹಿಷ್ಕಾರದ ನಡುವೆ, ಶ್ರೀಕೃಷ್ಣ ಸಮಿತಿಯ ವರದಿ ಬಗ್ಗೆ ಚರ್ಚಿಸಲು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಗುರುವಾರ ಇಲ್ಲಿ ಕರೆದಿದ್ದ ಆಂಧ್ರಪ್ರದೇಶದ ವಿವಿಧ ರಾಜಕೀಯ ಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್, ಸಿಪಿಐ, ಸಿಪಿಎಂ, ಎಂಐಎಂ (ಮಜಲೀಸ್-ಎ-ಇತ್ತೇಹದುಲ್ ಮುಸ್ಲಿಮೀನ್) ಹಾಗೂ ಪಿಆರ್‌ಪಿ (ಪ್ರಜಾರಾಜ್ಯಂ) ಪ್ರತಿನಿಧಿಗಳು ಭಾಗವಹಿಸಿದ್ದರು.

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಚಿದಂಬರಂ, ಮುಕ್ತ ಮನಸ್ಸಿನಿಂದ ಸಮಿತಿಯ ಶಿಫಾರಸುಗಳನ್ನು ಓದಿ, ನಿಷ್ಪಕ್ಷಪಾತ ಪರಿಶೀಲನೆ ನಡೆಸುವಂತೆ ಮನವಿ ಮಾಡಿದರು. ಕೇಂದ್ರ ಸರ್ಕಾರವು ತೆಲಂಗಾಣ ರಾಜ್ಯ ರಚನೆ ಬೇಡಿಕೆ ಬಗ್ಗೆ ಸಂಬಂಧಿಸಿದ ಎಲ್ಲರ ಬೆಂಬಲದಿಂದ ವಿಸ್ತೃತ ಕ್ರಮಗಳ ಸಹಿತ ‘ನಿಷ್ಪಕ್ಷಪಾತ, ಗೌರವಾನ್ವಿತ ಹಾಗೂ ವಾಸ್ತವಕ್ಕೆ ಸಮೀಪದ ಪರಿಹಾರ’ ಕಂಡುಹಿಡಿಯಲು ಬಯಸಿದೆ ಎಂದರು.

ಶಾಂತಿ ಕಾಪಾಡಲು ಮನವಿ: ನಾಲ್ಕು ರಾಜಕೀಯ ಪಕ್ಷಗಳು ಶಾಂತಿ ಮತ್ತು ಸೌಹಾರ್ದ ಕಾಪಾಡುವಂತೆ ಜನತೆಗೆ ಮನವಿ ಮಾಡಿವೆ.

ವಿಭಜನೆಯೊಂದೇ ದಾರಿ: ಗೃಹ ಸಚಿವರ  ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಶಾಸಕ ಉತ್ತಮ್ ಕುಮಾರ್ ರೆಡ್ಡಿ, ‘ರಾಜ್ಯವನ್ನು ಆಂಧ್ರ ಮತ್ತು ತೆಲಂಗಾಣ ಭಾಗಗಳಾಗಿ ವಿಭಜಿಸುವುದೊಂದೇ ಒಪ್ಪಿಗೆಯಾಗುತ್ತದೆ’ ಎಂದು ತಿಳಿಸಿದ್ದಾರೆ. ‘ಹೈದರಾಬಾದ್‌ನ್ನು ತೆಲಂಗಾಣದ ರಾಜಧಾನಿ ಮಾಡಿ, ರಾಜ್ಯವನ್ನು ಎರಡು ಭಾಗ ಮಾಡುವ ಐದು ಪರಿಹಾರ ಸೂತ್ರಗಳು ಮಾತ್ರ ಒಪ್ಪುವಂತಹವು’ ಎಂದು ನುಡಿದಿದ್ದಾರೆ. ‘ತೆಲಂಗಾಣ ವಿಷಯವನ್ನು ಹಾಗೆಯೇ ಉಳಿಸಿಕೊಂಡು ಪರಿಹಾರ ಹುಡುಕಬೇಕು’ ಎಂದು ಸಿಪಿಎಂ ನಾಯಕ ಬಿ.ವಿ. ರಾಘವಲು ಹೇಳಿದ್ದಾರೆ.

ಟಿಆರ್‌ಎಸ್ ಪ್ರತಿಕ್ರಿಯೆ: ‘ಹೈದರಾಬಾದ್ ರಾಜಧಾನಿಯಾಗಿರುವ ತೆಲಂಗಾಣ ರಾಜ್ಯವನ್ನು ಮಾತ್ರ ಟಿಆರ್‌ಎಸ್ ಒಪ್ಪಿಕೊಳ್ಳುತ್ತದೆ’ ಎಂದು ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ಕೆ. ಚಂದ್ರಶೇಖರರಾವ್ ತಿಳಿಸಿದ್ದಾರೆ.

ಪ್ರಕರಣ ದಾಖಲು: ಶ್ರೆಕೃಷ್ಣ ಸಮಿತಿಯ ಸದಸ್ಯರಾದ ಅಬುಸಲೇಹ್ ಶರೀಫ್ ಮತ್ತು ರವೀಂದರ್ ಕೌರ್ ವಿರುದ್ಧ ಪೊಲೀಸರು ಹೈದಾರಾಬಾದ್ ಸ್ಥಳೀಯ ಕೋರ್ಟ್‌ನ ನಿರ್ದೇಶನದಂತೆ ಪ್ರಕರಣ ದಾಖಲಿಸಿದ್ದಾರೆ. ಚಾನೆಲ್‌ವೊಂದರಲ್ಲಿ ಈ ಇಬ್ಬರು ಅಲ್ಪಸಂಖ್ಯಾತರಿಗೆ ಪ್ರತ್ಯೇಕ ರಾಜ್ಯದ ಚಳವಳಿಗಿಂತ ಅಭಿವೃದ್ಧಿಯಲ್ಲಿ ಹೆಚ್ಚು ಆಸಕ್ತಿ ಎಂದಿದ್ದಾರೆ ಎಂದು ಆರೋಪಿಸಿ ವಕೀಲರೊಬ್ಬರು ದೂರು ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT