ಮುಂಬೈ (ಐಎಎನ್ಎಸ್): ರಾಜ್ಯದಲ್ಲಿ ಬಿರುಗಾಳಿ ಸಹಿತ ಸುರಿದ ಆಲಿಕಲ್ಲು ಮಳೆಯಿಂದ ತೊಂದರೆಗೊಳಗಾದ ರೈತರಿಗೆ ಪರಿಹಾರ ಕಲ್ಪಿಸಲು ತಮ್ಮ ಸರ್ಕಾರವು ಬದ್ಧವಾಗಿದೆ ಎಂದು ಬುಧವಾರ ಇಲ್ಲಿ ಭರವಸೆ ನೀಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವೀರಾಜ್ ಚವಾಣ್ ಅವರು ಜೀವಕ್ಕೆ ತೊಂದರೆಯಾಗುವಂತಹ ಅಹಿತಕರ ನಿರ್ಧಾರಗಳನ್ನು ಕೈಗೊಳ್ಳಬೇಡಿ ಎಂದು ರೈತ ಸಮುದಾಯಕ್ಕೆ ಮನವಿ ಮಾಡಿದರು.
ಭಾನುವಾರದಿಂದ ರೈತ ಆತ್ಮಹತ್ಯೆಗಳ ಸಂಖ್ಯೆ ಕನಿಷ್ಠ 32ಕ್ಕೆ ಏರಿದ ಗಂಭೀರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಭರವಸೆ ನೀಡಿದ ಅವರು 'ಆತ್ಮಹತ್ಯೆ ಮಾಡಿಕೊಳ್ಳಬೇಡಿ' ಎಂದು ರೈತರನ್ನು ಕಳಕಳಿಯಿಂದ ಕೇಳಿಕೊಂಡರು.
ಇತ್ತೀಚಿನ ಭಾರಿ ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆ 35 ಜಿಲ್ಲೆಗಳ ಪೈಕಿ 28 ಜಿಲ್ಲೆಗಳಲ್ಲಿ ಅನಾಹುತ ಉಂಟು ಮಾಡಿರುವುದು ಸರ್ಕಾರದ ಅರಿವಿನಲ್ಲಿ ಇದೆ. ನಾವು ನಿಮ್ಮೊಂದಿಗಿದ್ದೇವೆ ಎಂದು ಭರವಸೆ ನೀಡಲು ಬಯಸುತ್ತೇನೆ. ಅಸಹಾಯಕ ಭಾವನೆಯಲ್ಲಿ ಕೊಚ್ಚಿಹೋಗಬೇಡಿ. ನಿಮಗೆ ನೆರವಾಗಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ ಎಂದು ಚವಾಣ್ ನುಡಿದರು.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸ್ಥಾಯೀ ಸೂಚನೆಗಳಿಗೆ ಅನುಗುಣವಾಗಿ ನೆರವು ಮತ್ತು ಪರಿಹಾರ ಕಲ್ಪಿಸುವ ಪ್ರಕ್ರಿಯೆಯನ್ನು ಸರ್ಕಾರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಪರಿಹಾರ ಕಾರ್ಯಕ್ಕೆ ಮುಂದಾಗುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಈಗಾಗಲೇ ನಿರ್ದೇಶನಗಳನ್ನು ನೀಡಲಾಗಿದೆ ಎಂದೂ ಅವರು ಹೇಳಿದರು.
'ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಇತರ ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ರೈತರ ನೆರವಿಗಾಗಿ 5000 ಕೋಟಿ ರೂಪಾಯಿಗಳನ್ನು ಒದಗಿಸುವಂತೆ ಮನವಿ ಮಾಡಿದ್ದೇನೆ. ಅಲ್ಲದೆ ಚುನಾವಣಾ ಆಯೋಗದ ಅಧಿಕಾರಿಗಳನ್ನೂ ಭೇಟಿ ಮಾಡಿ ರಾಜ್ಯದಲ್ಲಿ ಭಾರಿ ಬಿರುಗಾಳಿ ಮಳೆ ಹಾಗೂ ಆಲಿಕಲ್ಲು ಮಳೆಯಿಂದ ಆಗಿರುವ ಅನಾಹುತದ ಬಗ್ಗೆ ವಿವರಿಸಿದ್ದೇನೆ' ಎಂದು ಚವಾಣ್ ವಿವರಿಸಿದರು.
ಪ್ರಧಾನಿಯವರು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಮತ್ತು ಇತರ ಸಚಿವರಾದ ಸುಶೀಲ್ ಕುಮಾರ್ ಶಿಂಧೆ, ಪಿ. ಚಿದಂಬರಂ, ಜೈರಾಂ ರಮೇಶ್ ಮತ್ತು ಎಂ.ಎಸ್. ಅಹ್ಲುವಾಲಿಯಾ ಅವರನ್ನು ಒಳಗೊಂಡ ಉನ್ನತ ಸಮಿತಿಯೊಂದನ್ನೂ ರಚಿಸಿದ್ದು, ಕೇಂದ್ರ ತಂಡವು ಈಗಾಗಲೇ ಹಾನಿಯ ಅಂದಾಜು ಮಾಡಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.