ADVERTISEMENT

ಆದರ್ಶ ಕಟ್ಟಡ ನೆಲಸಮ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 18:00 IST
Last Updated 15 ಫೆಬ್ರುವರಿ 2011, 18:00 IST

ಮುಂಬೈ (ಪಿಟಿಐ): ಇಲ್ಲಿನ ಹಗರಣಯುಕ್ತ ಆದರ್ಶ ಗೃಹ ನಿರ್ಮಾಣ ಸಂಸ್ಥೆಯ ಬಹುಮಹಡಿ ಕಟ್ಟಡ ಕೆಡವಲು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಆದೇಶ ಹೊರಡಿಸಿದ ಒಂದು ತಿಂಗಳ ನಂತರ ಈಗ ಇದನ್ನು ಪ್ರಶ್ನಿಸಿ ಸಂಸ್ಥೆಯ ಸದಸ್ಯರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಕರಾವಳಿ ನಿಯಮಗಳನ್ನು ಉಲ್ಲಂಘಿಸಿ, ದಕ್ಷಿಣ ಮುಂಬೈನಲ್ಲಿ ನಿರ್ಮಿಸಿರುವ 31 ಮಹಡಿಗಳ ಈ ಅನಧಿಕೃತ ವಸತಿ ಸಂಕೀರ್ಣವನ್ನು ಮೂರು ತಿಂಗಳಲ್ಲಿ ನೆಲಸಮ ಮಾಡುವಂತೆ ಪರಿಸರ ಸಚಿವಾಲಯ ಜನವರಿ 16ರಂದು ಸಂಸ್ಥೆಗೆ ನಿರ್ದೇಶನ ನೀಡಿತ್ತು. ಆದರೆ ಈ ಆದೇಶವು ಕಾನೂನು ಪ್ರಕಾರ ಸರಿಯಲ್ಲವೆಂದು ಆರೋಪಿಸಿ ಸಂಸ್ಥೆಯ ಸುಮಾರು 103 ಸದಸ್ಯರು ಸೋಮವಾರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯು ಸದ್ಯದಲ್ಲಿಯೇ ವಿಚಾರಣೆಗೆ ಬರಲಿದೆ. ವಕೀಲ ಅಮಿತ್ ನಾಯ್ಕಾ ಅವರು ಸಲ್ಲಿಸಿರುವ ಈ ಅರ್ಜಿಯ ಪ್ರಕಾರ, ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ಎಲ್ಲ ಇಲಾಖೆಗಳಿಂದಲೂ ಎಲ್ಲ ಅವಶ್ಯಕ ಅನುಮತಿಯನ್ನು ಪಡೆಯಲಾಗಿದೆ. ಸಂಸ್ಥೆ ಎಲ್ಲ ನಿಯಮಗಳನ್ನು ಅನುಸರಿಸಿದ್ದು, ಸರ್ಕಾರದಿಂದ ಅಗತ್ಯ ಅನುಮತಿ ಪಡೆದಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.