ಮುಂಬೈ (ಪಿಟಿಐ): ಬಹುಕೋಟಿ ಆದರ್ಶ ವಸತಿ ಹಗರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ ಚವಾಣ್ ಸೇರಿದಂತೆ 13 ಜನರ ವಿರುದ್ಧ ಸಿಬಿಐ ಬುಧವಾರ ಆರೋಪ ಪಟ್ಟಿ ದಾಖಲಿಸಿದೆ.
ಪ್ರಕರಣ ದಾಖಲಿಸಿದ ಸುಮಾರು 18 ತಿಂಗಳುಗಳ ನಂತರ ಹತ್ತು ಸಾವಿರ ಪುಟಗಳನ್ನು ಒಳಗೊಂಡ ಆರೋಪ ಪಟ್ಟಿಯನ್ನು ಸಿಬಿಐ ಪೊಲೀಸರು ಇಲ್ಲಿಯ ಸೆಷನ್ಸ್ ಕೋರ್ಟ್ ರಿಜಿಸ್ಟ್ರಾರ್‌ಗೆ ಸಲ್ಲಿಸಿದರು. ಚವಾಣ್ ರಾಜೀನಾಮೆಗೆ ಕಾರಣವಾದ ಈ ಹಗರಣ ಮಹಾರಾಷ್ಟ್ರ ರಾಜಕೀಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು.
ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕಳೆದ ವರ್ಷದ ಜನವರಿ 29ರಂದು ಚವಾಣ್, ಅಧಿಕಾರಿಗಳು ಹಾಗೂ ನಿವೃತ್ತ ಸೇನಾ ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. ಹಗರಣದಲ್ಲಿ ಆರೋಪಿತ 14 ಜನರಲ್ಲಿ ಸಿಬಿಐ ಈಗಾಗಲೆ 9 ಜನರನ್ನು ಬಂಧಿಸಿತ್ತು. ಅವರೆಲ್ಲ ಜಾಮೀನಿನ ಮೇಲೆ ಹೊರಬಂದಿದ್ದಾರೆ.
ಈ ನಡುವೆ ಹಗರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆಯ ಮಧ್ಯಪ್ರವೇಶಕ್ಕೆ ಅನುಮತಿ ನೀಡಿರುವ ಬಾಂಬೆ ಹೈಕೋರ್ಟ್, ಈ ಹಗರಣವನ್ನು ಸಿಬಿಐ ಕೈಗೆತ್ತಿಕೊಳ್ಳಬಾರದು ಎಂಬ ಮಹಾರಾಷ್ಟ್ರ ಸರ್ಕಾರದ ನಿಲುವಿನ ಕುರಿತು ಎರಡು ವಾರದೊಳಗೆ ಪ್ರಮಾಣಪತ್ರ ಸಲ್ಲಿಸಲು ಸೂಚಿಸಿದೆ.
ಆದರ್ಶ ವಸತಿ ಸಮುಚ್ಚಯದ ಜಾಗ ತನ್ನ ವ್ಯಾಪ್ತಿಯದ್ದಾಗಿರುವುದರಿಂದ ಈ ಸಂಬಂಧದ ತನಿಖೆಯನ್ನು ಸಿಬಿಐ ಕೈಗೊಳ್ಳುವಂತಿಲ್ಲ ಎಂಬ ಮಹಾರಾಷ್ಟ್ರ ಸರ್ಕಾರದ ವಾದವನ್ನು ರಕ್ಷಣಾ ಇಲಾಖೆಯ ವಕೀಲ ಕೆವಿಕ್ ಸೆತಲ್‌ವಾಡ್ ವಿರೋಧಿಸಿದ್ದಾರೆ. ಸೆತಾಲ್‌ವಾಡ್ ಮನವಿ ಮೇರೆಗೆ ರಕ್ಷಣಾ ಇಲಾಖೆಯ ಮಧ್ಯಪ್ರವೇಶಕ್ಕೆ ಕೋರ್ಟ್ ಇದೀಗ ಅನುಮತಿ ನೀಡಿದೆ.
ವಿರೋಧಿಗಳ ಸಂಚು: ಸಿಬಿಐ ಕ್ರಮದ ಕುರಿತು ಪ್ರತಿಕ್ರಿಯಿಸಿರುವ ಅಶೋಕ ಚವಾಣ್, `ತಮ್ಮನ್ನು ಮೂಲೆಗುಂಪು ಮಾಡಲು ವಿರೋಧಿಗಳು ಹೆಣೆದ ಸಂಚು ಇದಾಗಿದ್ದು, ಆರೋಪ ಪಟ್ಟಿ ಸಲ್ಲಿಸಿದ್ದು ಅನಿರೀಕ್ಷಿತ, ದುರದೃಷ್ಟಕರ~ ಎಂದಿದ್ದಾರೆ.
ಈ ನಡುವೆ ಹಗರಣದಲ್ಲಿ ಭಾಗಿಯಾದ ಮತ್ತಷ್ಟು ಹಿರಿಯ ಕಾಂಗ್ರೆಸ್ ಮುಖಂಡರ ವಿರುದ್ಧವೂ ಆರೋಪ ಪಟ್ಟಿ ಸಲ್ಲಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಮುಖಂಡ ಏಕನಾಥ ಖಡ್ಸೆ ಆಗ್ರಹಿಸಿದ್ದಾರೆ.
ಏನಿದು `ಆದರ್ಶ~ ಹಗರಣ?
ಮುಂಬೈನ ಕೊಲಾಬಾದಲ್ಲಿ ತಲೆ ಎತ್ತಿ ನಿಂತಿರುವ ಆದರ್ಶ ಗೃಹನಿರ್ಮಾಣ ಸಂಘಕ್ಕೆ ಸೇರಿದ ಬಹುಮಹಡಿಗಳ ವಸತಿ ಸಮುಚ್ಚಯ `ಭ್ರಷ್ಟಾಚಾರದ ಸ್ಮಾರಕ~ ಎಂದೇ ಬಣ್ಣಿಸಲಾಗುತ್ತಿದೆ.
ರಕ್ಷಣಾ ಇಲಾಖೆ ಸಿಬ್ಬಂದಿ ನಿರ್ಮಿಸಿಕೊಂಡ ಆದರ್ಶ ಗೃಹ ನಿರ್ಮಾಣ ಸಹಕಾರಿ ಸಂಘಕ್ಕೆ ರಾಜ್ಯ ಸರ್ಕಾರ ಜಾಗ ನೀಡಿತ್ತು. ಕಾರ್ಗಿಲ್ ಕಾಳಗದಲ್ಲಿ ಮೃತಪಟ್ಟ ಯೋಧರ ಪತ್ನಿಯರಿಗಾಗಿ ಹಾಗೂ ಕಾಳಗದಲ್ಲಿ ಪಾಲ್ಗೊಂಡ ಯೋಧರಿಗಾಗಿಯೇ ಈ ವಸತಿ ಸಮುಚ್ಚಯ ನಿರ್ಮಿಸುವ ಉದ್ದೇಶ ಹೊಂದಲಾಗಿತ್ತು.
ವಸತಿ ಸಮುಚ್ಚಯದಲ್ಲಿ ಸೇನಾ ಸಿಬ್ಬಂದಿ ಜತೆಗೆ ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕಡಿಮೆ ದರದಲ್ಲಿ ಫ್ಲ್ಯಾಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಶೇ 40 ರಷ್ಟು ರಕ್ಷಣಾ ಇಲಾಖೆಯೇತರ ಜನರಿಗೆ ಫ್ಲ್ಯಾಟ್ ಪಡೆಯಲು ಆಗಿನ ಮುಖ್ಯಮಂತ್ರಿ ಅಶೋಕ್ ಚವಾಣ್ ಅನುಮತಿ ನೀಡಿದ ಆರೋಪ ಇದೆ.
ಪ್ರಕರಣದ ತನಿಖೆ ಕೈಗೊಂಡ ಸಿಬಿಐ, ಮಾಜಿ ಮುಖ್ಯಮಂತ್ರಿಗಳಾದ ಸುಶೀಲಕುಮಾರ ಸಿಂಧೆ, ವಿಲಾಸರಾವ್ ದೇಶಮುಖ ಹಾಗೂ ಅಶೋಕ್ ಚವಾಣ್ ವಿರುದ್ಧವೂ ಆರೋಪ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.