ಮುಂಬೈ (ಪಿಟಿಐ): ವಿವಾದಿತ ಆದರ್ಶ ಗೃಹ ಮಂಡಳಿ ಕಟ್ಟಡದ ಜಾಗವು ರಾಜ್ಯ ಸರ್ಕಾರಕ್ಕೆ ಸೇರಿದೆಯೇ ಹೊರತು ಸೇನೆಯದಲ್ಲ ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ನ್ಯಾಯಾಂಗ ಸಮಿತಿಯು ಹೇಳಿದೆ. ಇದರಿಂದ ಮಹಾರಾಷ್ಟ್ರ ಸರ್ಕಾರ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಬಾಂಬೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜೆ.ಎ.ಪಾಟೀಲ್, ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ಪಿ.ಸುಬ್ರಮಣಿಯನ್ ನೇತೃತ್ವದ ದ್ವಿಸದಸ್ಯ ಸಮಿತಿಯು ಕಳೆದ ಶುಕ್ರವಾರ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದು, ಈ ಕಟ್ಟಡವನ್ನು ಸೈನಿಕರು ಹಾಗೂ ಅವರ ವಿಧವಾ ಪತ್ನಿಯರಿಗೆ ಮೀಸಲಾಗಿಟ್ಟಿಲ್ಲ ಎಂದೂ ಹೇಳಿದೆ.
ಸಮಿತಿ ಸಲ್ಲಿಸಿದ ಮಧ್ಯಂತರ ವರದಿ ಕುರಿತು ಮಂಗಳವಾರ ಮಹಾರಾಷ್ಟ್ರ ಸಂಪುಟದಲ್ಲಿ ಚರ್ಚೆ ನಡೆದಿದೆ.
ಕೊಲಾಬಾದಲ್ಲಿರುವ 31 ಮಹಡಿಯ ಈ ಕಟ್ಟಡದ ಮಾಲೀಕತ್ವದ ಬಗ್ಗೆ ವರದಿ ಬೆಳಕು ಚೆಲ್ಲಿದೆ ಎಂದು ಮೂಲಗಳು ತಿಳಿಸಿವೆ. ಈ ಜಮೀನು ರಕ್ಷಣಾ ಸಚಿವಾಲಯಕ್ಕೆ ಸೇರಿದ್ದರೂ ಇದನ್ನು ಸರ್ಕಾರವು ಆದರ್ಶ ಸೊಸೈಟಿಗೆ ಮಂಜೂರು ಮಾಡಿದೆ, ಅಲ್ಲದೆ ಕಟ್ಟಡ ನಿರ್ಮಾಣದಲ್ಲಿ ಪೌರ ಹಾಗೂ ಪರಿಸರ ನಿಯಮ ಉಲ್ಲಂಘಿಸಲಾಗಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.