ADVERTISEMENT

ಆದಾಯಕ್ಕಿಂತ ಜಾಸ್ತಿ ಸಂಪತ್ತು ಅಧಿಕಾರಿ, ಪತ್ನಿಗೆ ಜೈಲು

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ನವದೆಹಲಿ (ಪಿಟಿಐ): ಆದಾಯಕ್ಕಿಂತಲೂ ಮೂರು ಪಟ್ಟು ಹೆಚ್ಚು ಸಂಪತ್ತು ಹೊಂದಿದ್ದ ಜಾರಿ ನಿರ್ದೇಶನಾಲಯದ ಮಾಜಿ ಸಹಾಯಕ ನಿರ್ದೇಶಕ ಡಿ.ಎಲ್.ವೇದ್ (67) ಮತ್ತು ಅವರಿಗೆ  ಕುಮ್ಮಕ್ಕು ನೀಡಿದ ಆರೋಪದ ಮೇಲೆ ಪತ್ನಿ ಕಮಲೇಶ್ ವೇದ್ (63) ಅವರಿಗೆ ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ  ಮೂರು ವರ್ಷ ಜೈಲು ಶಿಕ್ಷೆ ಹಾಗೂ ತಲಾ 25 ಸಾವಿರ ರೂಪಾಯಿ ದಂಡ ವಿಧಿಸಿದೆ.

ತೀರ್ಪು ನೀಡಿದ ವಿಶೇಷ ನ್ಯಾಯಾಧೀಶ ಪಿ.ಎಸ್.ತೇಜ್, `ಆರೋಪಿಗಳಿಗೆ ತಮ್ಮ ಆದಾಯ ಮೂಲಗಳನ್ನು ತಿಳಿಸಲು ನ್ಯಾಯಾಲಯ ದೀರ್ಘ ಅವಕಾಶನೀಡಿದರೂ, ಅದನ್ನು ಒದಗಿಸಲು ಅವರು ವಿಫಲರಾಗಿದ್ದಾರೆ ಎಂದಿದ್ದಾರೆ. 1971ರಲ್ಲಿ ಜಾರಿ ನಿರ್ದೇಶನಾಲಯದ ಸಹಾಯಕ ಅಧಿಕಾರಿಯಾಗಿ ಸೇರಿದ ವೇದ್, ನಂತರ 1987ರ ಜೂನ್‌ನಲ್ಲಿ ಮುಖ್ಯ ಜಾರಿ ನಿರ್ದೇಶನಾಲಯದ ಅಧಿಕಾರಿಯಾಗಿ, ಅನಂತರ ದೆಹಲಿ ವಲಯದ ಸಹಾಯಕ ನಿರ್ದೇಶಕರಾಗಿ ಬಡ್ತಿ ಪಡೆದು 1995ರವರೆಗೆ ಕಾರ್ಯ ನಿರ್ವಹಿಸಿದ್ದರು.

1987ರಿಂದ 1995ರ ಅವಧಿಯಲ್ಲಿ ಅಕ್ರಮವಾಗಿ ಹಣ ಹಾಗೂ ಆಸ್ತಿ ಹೊಂದುವ ಮೂಲಕ `ಭ್ರಷ್ಟಾಚಾರ ನಿರೋಧ ಕಾಯಿದೆ~ ಉಲ್ಲಂಘಿಸಿದ್ದಾರೆ ಎಂಬ ದೂರಿನ ಮೇಲೆ ಸಿಬಿಐ ತನಿಖೆ ನಡೆಸಿದಾಗ, ವೇದ್ ಅವರ ಎಲ್ಲ ಮೂಲಗಳ ಒಟ್ಟು ಆದಾಯ 28.42 ಲಕ್ಷ ರೂಪಾಯಿ ಬದಲಿಗೆ 75.80 ಲಕ್ಷ ರೂಪಾಯಿ ಕಂಡುಬಂದಿತ್ತು. ವೇದ್ ಮತ್ತು ಅವರ ಪತ್ನಿ ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಆದಾಯ ಮೀರಿ ಹೆಚ್ಚುವರಿ  ಸಂಪತ್ತು ಹೊಂದಿದ್ದಾರೆ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು.

 ಅಲ್ಲದೆ  ಪತ್ನಿ, ಮಗ, ಮಗಳ ಹೆಸರಿನಲ್ಲಿ ಅಕ್ರಮವಾಗಿ ಸಾಕಷ್ಟುಆಸ್ತಿ ಹೊಂದಿದ್ದಾರೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.