ADVERTISEMENT

ಆಧಾರ್‌: ಮುಖ ಗುರುತು ತಂತ್ರಜ್ಞಾನ ಜುಲೈ 1ರಿಂದ ಜಾರಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2018, 19:34 IST
Last Updated 25 ಮಾರ್ಚ್ 2018, 19:34 IST
ಆಧಾರ್‌: ಮುಖ ಗುರುತು ತಂತ್ರಜ್ಞಾನ ಜುಲೈ 1ರಿಂದ ಜಾರಿ
ಆಧಾರ್‌: ಮುಖ ಗುರುತು ತಂತ್ರಜ್ಞಾನ ಜುಲೈ 1ರಿಂದ ಜಾರಿ   

ನವದೆಹಲಿ: ಮುಖ ಗುರುತಿಸುವ ಮೂಲಕ ಆಧಾರ್‌ ದೃಢೀಕರಣದ ತಂತ್ರಜ್ಞಾನವನ್ನು ಜುಲೈ 1ರಿಂದ ಜಾರಿಗೆ ತರಲು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರವು (ಯುಐಡಿಎಐ) ಸಿದ್ಧತೆ ಮಾಡಿಕೊಂಡಿದೆ.

ವೃದ್ಧಾ‍ಪ್ಯ ಅಥವಾ ಬೆರಳಚ್ಚು ಅಳಿಸಿ ಹೋಗಿರುವ ಕಾರಣದಿಂದ ಬಯೊಮೆಟ್ರಿಕ್‌ ದೃಢೀಕರಣ ಸಾಧ್ಯವಾಗದ ಜನರಿಗೆ ಮುಖ ಗುರುತಿಸುವಿಕೆ ತಂತ್ರಜ್ಞಾನ ನೆರವಾಗಲಿದೆ.

ಈ ಸೌಲಭ್ಯವನ್ನು ಆದಷ್ಟು ಬೇಗನೆ ಆರಂಭಿಸಲಾಗುವುದು ಎಂದು ಯುಐಡಿಎಐ ಜನವರಿಯಲ್ಲೇಘೋಷಿಸಿತ್ತು.

ADVERTISEMENT

ಆಧಾರ್‌ ನೋಂದಾಯಿತರ ದೃಢೀಕರಣಕ್ಕಾಗಿ ಮುಖ ಗುರುತಿಸುವಿಕೆ ತಂತ್ರಜ್ಞಾನದ ಜತೆಗೆ ಬೇರೊಂದು ಗುರುತಿನ ದೃಢೀಕರಣವೂ ಬೇಕು. ಬೆರಳಚ್ಚು, ಕಣ್ಣಿನ ಪಾಪೆ ಮತ್ತು ಒಟಿಪಿಯಲ್ಲಿ (ಒಂದು ಬಾರಿಯ ಪಾಸ್‌ವರ್ಡ್‌) ಯಾವುದಾದರೂ ಒಂದನ್ನು ಬಳಸಬೇಕು. ಅಂದರೆ, ಮುಖದ ಗುರುತಿಸುವಿಕೆ ಜತೆಗೆ ಮತ್ತೊಂದು ಗುರುತಿನ ಸಂಯೋಜನೆಯಾದಾಗ ಮಾತ್ರ ಈ ದೃಢೀಕರಣ ಮೌಲಿಕವಾಗುತ್ತದೆ.

ಬ್ಯಾಂಕುಗಳು, ದೂರಸಂಪರ್ಕ ಸಂಸ್ಥೆಗಳು, ಸಾರ್ವಜನಿಕ ವಿತರಣೆ ವ್ಯವಸ್ಥೆ ಮತ್ತು ಆದಾಯ ತೆರಿಗೆ ಇಲಾಖೆಗಳು ಗುರುತು ದೃಢೀಕರಣಕ್ಕಾಗಿ ಆಧಾರ್‌ ಸಂಖ್ಯೆಯನ್ನು ಬಳಸುತ್ತಿವೆ.

ಆಧಾರ್‌ ಯೋಜನೆಯಲ್ಲಿ ದತ್ತಾಂಶ ಸುರಕ್ಷತೆಯ ಬಗ್ಗೆ ಯುಐಡಿಎಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯಭೂಷಣ್‌ ಪಾಂಡೆ ಅವರು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠಕ್ಕೆ ಇತ್ತೀಚೆಗೆ ಮಾಹಿತಿ ನೀಡಿದ್ದರು. ಪ್ರತಿ ದಿನ ಆಧಾರ್‌ ಮೂಲಕ ಸರಾಸರಿ ನಾಲ್ಕು ಕೋಟಿ ದೃಢೀಕರಣ ನಡೆಯುತ್ತಿದೆ ಎಂದು ಅವರು ಹೇಳಿದ್ದರು.

ಮುಖದ ಚಿತ್ರ ಕೊಡಬೇಕಿಲ್ಲ
ಆಧಾರ್‌ ನೋಂದಣಿ ಮಾಡಿಕೊಂಡಿರುವವರು ಮುಖಚಹರೆಯ ವಿವರಗಳನ್ನು ನೀಡಲು ಮತ್ತೆ ಯುಐಡಿಎಐ ಕೇಂದ್ರಕ್ಕೆ ಹೋಗಬೇಕಾದ ಅಗತ್ಯ ಇಲ್ಲ. ಬಯೊಮೆಟ್ರಿಕ್‌ ವಿವರಗಳನ್ನು ಸಂಗ್ರಹಿಸುವಾಗ ಪಡೆದುಕೊಂಡಿರುವ ಮುಖದ ವಿವರಗಳನ್ನೇ ಬಳಸಿಕೊಂಡು ಮುಖ ಗುರುತಿಸುವಿಕೆ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುವುದು.

‘ಆಧಾರ್‌ ನೋಂದಣಿ ಸಂದರ್ಭದಲ್ಲಿ ಮುಖದ ಚಿತ್ರವನ್ನೂ ಸೆರೆಹಿಡಿಯಲಾಗುತ್ತದೆ’ ಎಂದು ಯುಐಡಿಎಐ ಹಿಂದೆಯೇ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.