ADVERTISEMENT

ಆಮದು ದರಕ್ಕೆ ಪೂರಕವಾಗಿ ತೈಲ ಬೆಲೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ): ದೇಶದೊಳಗೆ ಮಾರಾಟ ಮಾಡುವ ಪೆಟ್ರೋಲಿಯಂ ಉತ್ಪನ್ನಗಳ ದರಗಳನ್ನು ಕಚ್ಚಾ ತೈಲದ ಅಂತರರಾಷ್ಟ್ರೀಯ ಮಾರುಕಟ್ಟೆ ಬೆಲೆಗಳಿಗೆ ಅನುಗುಣವಾಗಿ ನಿಗದಿ ಪಡಿಸುವುದು ಒಳಿತು ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸೋಮವಾರ ಇಲ್ಲಿ ಪ್ರತಿಪಾದಿಸಿದರು.

ಅವರು 10ನೇ `ಪೆಟ್ರೊಟೆಕ್ ತೈಲ ಮತ್ತು ಅನಿಲ ಸಮಾವೇಶ~ ಉದ್ಘಾಟಿಸಿ ಮಾತನಾಡಿ, ಗ್ರಾಹಕರು ಹಾಗೂ ತೈಲ ವಲಯದ ಬಂಡವಾಳ ಹೂಡಿಕೆದಾರರ ಹಿತದೃಷ್ಟಿಯಿಂದ ಇಂಥ ಕ್ರಮ ಅನಿವಾರ್ಯ ಎಂದು ಹೇಳಿದರು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ನಿರಂತರವಾಗಿ ಏರುತ್ತಲೇ ಇದ್ದರೂ ಪೆಟ್ರೋಲಿಯಂ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಮಾರುತ್ತಿರುವುದರಿಂದ ನಷ್ಟವಾಗುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರ ದರ ಹೊಂದಾಣಿಕೆ ಕುರಿತು ಕಾಲಮಿತಿ ಕಾರ್ಯಕ್ರಮಕ್ಕೆ ಬದ್ಧವಾಗಿದೆ ಎಂದರು.

`ಹಣಕಾಸು ಮಾರುಕಟ್ಟೆಯಂತೆ ತೈಲ ಮಾರುಕಟ್ಟೆಯ ಸ್ವರೂಪವೂ ವಿಶ್ವ ಮಟ್ಟದ್ದಾಗಿದ್ದು ಪರಸ್ಪರ ಅವಲಂಬಿಸಿದೆ. ಈ ವ್ಯವಸ್ಥೆಯಿಂದ ಹೊರಬಂದು ಯಾವುದೇ ಒಂದು ರಾಷ್ಟ್ರವೂ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಭಾರತ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯ ಏರಿಳಿತಗಳಿಗೆ ಅನುಗುಣವಾಗಿಯೇ ದರ ನಿಗದಿಪಡಿಸುವ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ~ ಎಂದು ಅಭಿಪ್ರಾಯಪಟ್ಟರು.

`ನಮ್ಮ ತೈಲೋತ್ಪನ್ನ ಬೇಡಿಕೆಯ ಶೇ 75ರಷ್ಟು ಭಾಗವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಇದಕ್ಕಾಗಿ ಪ್ರತಿವರ್ಷ 7.80 ಲಕ್ಷ ಕೋಟಿ ರೂಪಾಯಿ (15 ಸಾವಿರ ಕೋಟಿ ಡಾಲರ್) ವಿದೇಶಿ ವಿನಿಮಯ ಖರ್ಚಾಗುತ್ತಿದೆ~ ಎಂದು ವಿವರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.