ADVERTISEMENT

‘ಆಯುಷ್ಮಾನ್‌ ಭಾರತ’ಕ್ಕೆ 8 ರಾಜ್ಯಗಳ ಒಪ್ಪಿಗೆ

ಪಿಟಿಐ
Published 9 ಜೂನ್ 2018, 19:30 IST
Last Updated 9 ಜೂನ್ 2018, 19:30 IST
‘ಆಯುಷ್ಮಾನ್‌ ಭಾರತ’ಕ್ಕೆ 8 ರಾಜ್ಯಗಳ ಒಪ್ಪಿಗೆ
‘ಆಯುಷ್ಮಾನ್‌ ಭಾರತ’ಕ್ಕೆ 8 ರಾಜ್ಯಗಳ ಒಪ್ಪಿಗೆ   

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಆಯುಷ್ಮಾನ್‌ ಭಾರತ’ ಯೋಜನೆ ಅನುಷ್ಠಾನಕ್ಕೆ ಎಂಟು ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳು ಕೇಂದ್ರ ಆರೋಗ್ಯ ಸಚಿವಾಲಯಯೊಂದಿಗೆ ಒಪ್ಪಂದ ಮಾಡಿಕೊಂಡಿವೆ.

ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆ ಅಡಿ ದೇಶದ 10 ಕೋಟಿ ಬಡ ಮತ್ತು ದುರ್ಬಲ ಕುಟುಂಬಗಳಿಗೆ ಪ್ರತಿವರ್ಷ ತಲಾ ₹5 ಲಕ್ಷವರೆಗೆ ಆರೋಗ್ಯ ವಿಮೆ ಒದಗಿಸುವ ಉದ್ದೇಶ ಸರ್ಕಾರಕ್ಕಿದೆ.

ಆ ಮೂಲಕ ಹಿಮಾಚಲ ಪ್ರದೇಶ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ ಹಾಗೂ ಉತ್ತರಾಖಂಡ ಸೇರಿದಂತೆ ಎಂಟು ರಾಜ್ಯಗಳು ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆ ಅನುಷ್ಠಾನಕ್ಕೆ ವಿಧ್ಯುಕ್ತವಾಗಿ ಒಪ್ಪಿಗೆ ಸೂಚಿಸಿವೆ.

ADVERTISEMENT

ದೆಹಲಿ, ಒಡಿಶಾ, ಪಂಜಾಬ್‌ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಈ ಯೋಜನೆ ಅಳವಡಿಕೆಗೆ ಇದುವರೆಗೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಈ ರಾಜ್ಯಗಳ ಜತೆಗೆ ಚರ್ಚೆ ಇನ್ನೂ ನಡೆಯುತ್ತಿದೆ ಎಂದು ಸಚಿವಾಲಯದ ಮೂಲಗಳು ಹೇಳಿವೆ.

ಒಪ್ಪಂದಕ್ಕೆ ಸಹಿ ಹಾಕಿರುವ ನಾಲ್ಕು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಚಂಡೀಗಡವೂ ಸೇರಿದೆ. ಗುಜರಾತ್‌, ಮಧ್ಯಪ್ರದೇಶ, ಉತ್ತರಪ್ರದೇಶ, ಬಿಹಾರ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ಅಂಡಮಾನ್‌ ನಿಕೋಬಾರ್‌ ದ್ವೀಪಗಳು ಸದ್ಯದಲ್ಲೇ ಸಹಿ ಹಾಕಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಒಪ್ಪಂದದ ಪ್ರಕಾರ ಕೇಂದ್ರದ ಜತೆಗೆ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಯೋಜನೆ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕಿದೆ. ಉಳಿದ ರಾಜ್ಯಗಳೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಯೋಜನೆ ಅನುಷ್ಠಾನ ಸಂಬಂಧ ದೇಶದಾದ್ಯಂತ ಕಾರ್ಯಾಗಾರ ನಡೆಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ 15ರೊಳಗೆ ಯೋಜನೆಗೆ ಚಾಲನೆ ನೀಡುವ ನಿರೀಕ್ಷೆ ಇದೆ.

ಚಿಕಿತ್ಸಾ ವೆಚ್ಚ ಶೇ 20ರಷ್ಟು ಅಗ್ಗ!

* 10 ಕೋಟಿ ಬಡ ಮತ್ತು ದುರ್ಬಲ ವರ್ಗದ ಕುಟುಂಬಗಳಿಗೆ ಪ್ರತಿವರ್ಷ ತಲಾ ₹5 ಲಕ್ಷ ಆರೋಗ್ಯ ವಿಮೆ

* ಯೋಜನೆ ಅಡಿ ಗುರುತಿಸಲಾದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದೇಶದ ಯಾವುದೇ ಮೂಲೆಯಲ್ಲದಾರೂ ಫಲಾನುಭವಿ ಕುಟುಂಬದ ಸದಸ್ಯರಿಗೆ ₹5 ಲಕ್ಷದವರೆಗೆ ನಗದು ರಹಿತವಾಗಿ ಚಿಕಿತ್ಸೆ

* ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆಗಿಂತ (ಸಿಜಿಎಚ್‌ಎಸ್) ಶೇ 15–20ರಷ್ಟು ಕಡಿಮೆ ದರದಲ್ಲಿ ಚಿಕಿತ್ಸಾ ವೆಚ್ಚ ನಿಗದಿ

* ಆಯುಷ್ಮಾನ್‌ ಭಾರತ ಪ್ಯಾಕೇಜ್‌ನಲ್ಲಿ 1,354 ವಿಧದ ಕಾಯಿಲೆಗಳಿಗೆ ಚಿಕಿತ್ಸೆ

* ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್‌, ನರರೋಗ ಸೇರಿದಂತೆ 20ಕ್ಕೂ ಹೆಚ್ಚು ಕಾಯಿಲೆಗಳಿಗೆ ವಿಶೇಷ ಚಿಕಿತ್ಸೆ

**

ಕೋಟ್ಯಂತರ ಜನರಿಗೆ ಆರೋಗ್ಯ ಸೌಲಭ್ಯ ಒದಗಿಸಲಿರುವ ‘ಆಯುಷ್ಮಾನ್‌ ಭಾರತ’ ಜಗತ್ತಿನ ಅತಿ ದೊಡ್ಡ ಆರೋಗ್ಯ ಯೋಜನೆಯಾಗಲಿದೆ
– ಜೆ.ಪಿ.ನಡ್ಡಾ, ಕೇಂದ್ರ ಆರೋಗ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.