ಮುಂಬೈ (ಪಿಟಿಐ): ಘಾಟ್ಕೋಪರ್ ಸ್ಫೋಟ ಕೃತ್ಯದ ಆರೋಪಿ ಸಯೀದ್ ಖ್ವಾಜಾ ಯೂನುಸ್ ಸಾವಿನ ಸಂಬಂಧ ಎನ್‌ಕೌಂಟರ್ ಪರಿಣತ ಸಚಿನ್ ವಜೆ ಮತ್ತು ಇತರ ಮೂವರು ಪೊಲೀಸರ ವಿರುದ್ಧ ಸಿಐಡಿ ಸಲ್ಲಿಸಿದ್ದ ಆರೋಪಪಟ್ಟಿಯನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ಇದರೊಂದಿಗೆ ಎಂಟು ವರ್ಷಗಳ ಹಿಂದಿನ ಈ ಪ್ರಕರಣದ ಬಗೆಗಿನ ವಿಚಾರಣೆ ಮುಂದಿನ ತಿಂಗಳು ಚಾಲನೆ ಪಡೆಯಲಿದೆ.
ರಾಜೇಂದ್ರ ತಿವಾರಿ, ರಾಜಾರಾಂ ನಿಕಂ ಮತ್ತು ಸುನಿಲ್ ದೇಸಾಯಿ ಆರೋಪಿಗಳಾಗಿರುವ ಇತರ ಮೂವರು ಪೊಲೀಸರು ಎಂದು ವಿಶೇಷ ಸಿಐಡಿ ಪ್ರಾಸಿಕ್ಯೂಟರ್ ಆರ್.ಬಿ.ಮೊಕಾಶಿ ತಿಳಿಸಿದ್ದಾರೆ. ಈ ನಾಲ್ವರ ವಿರುದ್ಧ ಕೊಲೆ, ಅಪರಾಧ ಸಂಚು ಹಾಗೂ ಇನ್ನಿತರ ಆರೋಪಗಳನ್ನು ಹೊರಿಸಲಾಗಿದೆ. 2002ರ ಡಿಸೆಂಬರ್‌ನಲ್ಲಿ ನಡೆದ ಘಾಟ್ಕೋಪರ್ ಸ್ಫೋಟ ಸಂಬಂಧ ದುಬೈನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಯೂನುಸ್‌ನನ್ನು ಡಿ.2ರಂದು ಮರಾಠವಾಡದ ಪಾರ್ಭನಿ ಪೊಲೀಸರು ಬಂಧಿಸಿದ್ದರು.
ಆನಂತರ 2003ರ ಜನವರಿಯಲ್ಲಿ ವಿಚಾರಣೆಗೆಂದು ಔರಂಗಾಬಾದ್‌ಗೆ ಕರೆದೊಯ್ಯುತ್ತಿದ್ದಾಗ ಪೊಲೀಸ್ ವಾಹನ ಅಪಘಾತಕ್ಕೀಡಾದ ಸಂದರ್ಭದಲ್ಲಿ ಯೂನುಸ್ ಪರಾರಿಯಾದ ಎಂದು ಪೊಲೀಸರು ಹೇಳಿಕೆ ನೀಡಿದ್ದರು. ಆದರೆ ಈ ಸ್ಫೋಟದ ಸಹ ಆರೋಪಿ ಅಬ್ದುಲ್ ಮತೀನ್, ವಿಚಾರಣಾಧೀನನಾಗಿದ್ದ ಅವಧಿಯಲ್ಲಿ ಯೂನುಸ್ ಸಾವಿಗೀಡಾದ ಎಂದು ಹೇಳಿದ್ದನು.ಆನಂತರ, ಯೂನುಸ್ ಪೋಷಕರು ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆಗ ಹೈಕೋರ್ಟ್ 2003ರ ಮಾರ್ಚ್‌ನಲ್ಲಿ ಈ ಪ್ರಕರಣ ಕುರಿತು ಸಿಬಿಐ ತನಿಖೆ ನಡೆಸಲು ಆದೇಶಿಸಿತ್ತು.
ಯೂನುಸ್ ಪರಾರಿಯಾದ ಎಂಬ ವಜೆ ಹಾಗೂ ಇತರ ಪೊಲೀಸರ ವಾದದಲ್ಲಿ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟ ಸಿಐಡಿ, ಕಸ್ಟಡಿ ಸಾವಿನ ಪ್ರಕರಣದಡಿ ನಾಲ್ವರು ಪೊಲೀಸರ ವಿರುದ್ಧ ಆರೋಪಪಟ್ಟಿ ದಾಖಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.