ನವದೆಹಲಿ (ಪಿಟಿಐ): ಲಲಿತ್ ಮೋದಿ ಅವರ ವೀಸಾ ನೆರವು ವಿವಾದ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಕ್ರಿಮಿನಲ್ ಪ್ರಕರಣಗಳ ಆರೋಪಿಗಳ ಪಾಲಿಗೆ ‘ಸುದಿನಗಳು’ (ಅಚ್ಛೇ ದಿನ್) ಬಂದಿವೆ ಎಂದು ಅಣಕವಾಡಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ‘ನಕಲಿ ಎನ್‌ಕೌಂಟರ್, ಹಣಲೇವಾದೇವಿ ಪ್ರಕರಣಗಳ ಅಮಿತ್ ಷಾ, ರಾಮದೇವ್ ಅವರಿಂದ ಹಿಡಿದು ಲಲಿತ್ ಮೋದಿವರೆಗೂ ಎಲ್ಲಾ ಆರೋಪಿಗಳಿಗೆ ಸುದಿನಗಳು ಬಂದಿವೆ’ ಎಂದು ವ್ಯಂಗ್ಯವಾಡಿದ್ದಾರೆ.
ರಾಜೀನಾಮೆಗೆ ಮನವಿ!: ಇನ್ನು, ಲಲಿತ್ ಮೋದಿ ಅವರ ವೀಸಾ ನೆರವು ವಿವಾದದಲ್ಲಿ ಸಿಲುಕಿರುವ ಸುಷ್ಮಾ ಸ್ವರಾಜ್ ಅವರ ಬಗ್ಗೆ ‘ಅನುಕಂಪ’ದ ಮಾತುಗಳನ್ನಾಡಿರುವ ದಿಗ್ವಿಜಯ್, ‘ಸುಷ್ಮಾಜಿ ಅವರ ಬಗ್ಗೆ ನನಗೆ ಗೌರವವಿದೆ. ಆದರೆ, ಆರೋಪಿಯೊಬ್ಬನಿಗೆ ನೆರವಾಗಲು ಅವರು ಮಧ್ಯ ಪ್ರವೇಶಿಸುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ!. ಸುಷ್ಮಾ ಅವರು ಬಿಜೆಪಿ ಪಕ್ಷದೊಳಗಿನ ಆಂತರಿಕ ಸಮರದ ಬಲಿಪಶು ಆಗಿರಬಹುದು. ಆದರೆ, ವಿಷಯ ಇದೀಗ ಸಾರ್ವಜನಿಕ ರಂಗಕ್ಕೆ ಬಂದಾಗಿದೆ. ಆದ್ದರಿಂದ ಅವರು ರಾಜೀನಾಮೆ ನೀಡಬೇಕು ಎಂದು ನಾನು ಕೋರುತ್ತೇನೆ’ ಎಂದು ಅವರು ಟ್ವೀಟಿಸಿದ್ದಾರೆ.
ಅಲ್ಲದೇ, ‘ಸ್ಕಾಟ್ಲೆಂಡ್‌ನಲ್ಲಿ ಆಸ್ತಿ ಖರೀದಿಸಿದಕ್ಕಾಗಿ ರಾಮದೇವ್ ಹಾಗೂ ಬಾಲಕೃಷ್ಣ ಅವರೂ ಕೂಡ ಹಣಲೇವಾದೇವಿ ಆರೋಪದಡಿ ಜಾರಿ ನಿರ್ದೇಶನಾಲದ ತನಿಖೆ ಎದುರಿಸುತ್ತಿದ್ದಾರೆ. ಈ ಪ್ರಕರಣವೂ ಸಮಾಪ್ತಿಯಾಗಬಹುದು’ ಎಂದು ಕಟಕಿಯಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.