ADVERTISEMENT

ಆರೋಪ ನಿರಾಕರಿಸಿ ತೇಜಿಂದರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 19:30 IST
Last Updated 10 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ/ಐಎಎನ್‌ಎಸ್): ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್ ಮತ್ತು ಇತರ ನಾಲ್ವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ನಿವೃತ್ತ ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ತೇಜಿಂದರ್ ಸಿಂಗ್, ಮಂಗಳವಾರ ದೆಹಲಿ ಮೆಟ್ರೊಪಾಲಿಟನ್ ನ್ಯಾಯಾಲಯದ ಮುಂದೆ ಹಾಜರಾಗಿ ಹೇಳಿಕೆ ನೀಡಿದರು.

 ಮೆಟ್ರೊಪಾಲಿಟನ್ ನ್ಯಾಯಾಧೀಶ ಸುದೇಶ್ ಕುಮಾರ್ ಅವರ ಮುಂದೆ ಹೇಳಿಕೆ ನೀಡಿದ ತೇಜಿಂದರ್, ತಮ್ಮ ವಿರುದ್ಧ ಸೇನಾ ಮುಖ್ಯಸ್ಥರು ಮಾಡಿರುವ ಆರೋಪ ನಿರಾಧಾರವಾಗಿದೆ ಎಂದರು.

`ಜನರಲ್ ವಿ.ಕೆ. ಸಿಂಗ್, ರಕ್ಷಣಾ ಸಚಿವಾಲಯ ಇರುವ ಸೌತ್ ಬ್ಲಾಕ್‌ನಲ್ಲಿ ಮೊಬೈಲ್ ಮಾತುಕತೆ ಕದ್ದಾಲಿಸಲು ಅನಧಿಕೃತವಾಗಿ ಆದೇಶ ನೀಡಿದ್ದರು ಎಂಬರ್ಥದ ವರದಿಗಳು ಮಾರ್ಚ್ 3 ಮತ್ತು 5ರ ಮಧ್ಯದಲ್ಲಿ ಮಾಧ್ಯಮಗಳಲ್ಲಿ ಹರಿದಾಡಿದ್ದವು. 

ಈ ವರದಿಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಸೇನಾ ಕೇಂದ್ರ ಕಚೇರಿ ಮಾರ್ಚ್ 5ರಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿತು. ಇದರಲ್ಲಿ ತಮ್ಮ ಹೆಸರು ಪ್ರಸ್ತಾಪಿಸಿದ್ದು, ವಿರುದ್ಧವಾಗಿ ನಾಲ್ಕು ಆರೋಪಗಳನ್ನು ಮಾಡಲಾಗಿತ್ತು~ ಎಂದು  ತೇಜಿಂದರ್ ಕೋರ್ಟ್‌ಗೆ ತಿಳಿಸಿದರು.

`ಮಾರ್ಚ್ 5ರ ಸಂಜೆ ಕೆಲ ಮಾಧ್ಯಮ ಪ್ರತಿನಿಧಿಗಳು ನನ್ನನ್ನು ಸಂಪರ್ಕಿಸಿದಾಗಲೇ ಸೇನೆ ಬಿಡುಗಡೆ ಮಾಡಿದ ಪ್ರಕಟಣೆ ನನ್ನ ಗಮನಕ್ಕೆ ಬಂತು.

ಸೇನಾ ಕೇಂದ್ರ ಕಚೇರಿ ನನ್ನ ಮೇಲೆ ಮಾಡಿದ ಹಠಾತ್ ಆರೋಪದಿಂದ ನಾನು ದಿಗ್ಭ್ರಾಂತನಾದೆ~ ಎಂದು ತೇಜಿಂದರ್ ಸಿಂಗ್ ಕೋರ್ಟ್‌ಗೆ ತಿಳಿಸಿದರು. ತೇಜಿಂದರ್ ಸಿಂಗ್ ಹೊರತಾಗಿ ಇತರ ಮೂವರು ಸಾಕ್ಷ್ಯಗಳ ಹೇಳಿಕೆಯನ್ನೂ ಕೋರ್ಟ್ ದಾಖಲಿಸಿಕೊಂಡಿತು.

 ಸಿಂಗ್ ಸಲ್ಲಿಸಿರುವ ದೂರಿನಲ್ಲಿ ಹೆಸರಿಸಲಾದ ವ್ಯಕ್ತಿಗಳಿಗೆ ಸಮನ್ಸ್ ಜಾರಿಗೊಳಿಸಲು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 21ಕ್ಕೆ ನಿಗದಿಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.