ADVERTISEMENT

ಆರೋಪ ಸಾಬೀತಾದರೆ ರಾಜೀನಾಮೆ: ಕಲ್ಮಾಡಿ ಸವಾಲು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 17:25 IST
Last Updated 20 ಫೆಬ್ರುವರಿ 2011, 17:25 IST

ನವದೆಹಲಿ, (ಪಿಟಿಐ): ಕಾಮನ್‌ವೆಲ್ತ್ ಕ್ರೀಡಾಕೂಟ ಹಗರಣದಲ್ಲಿ ತಾವು ಒಂದೇ ಒಂದು ರೂಪಾಯಿ ಪಡೆದಿರುವುದನ್ನು ಸಾಬೀತುಪಡಿಸಿದರೂ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಕ್ರೀಡಾಕೂಟ ಸಂಘಟನಾ ಸಮಿತಿಯ ಮಾಜಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಸವಾಲು ಹಾಕಿದ್ದಾರೆ.

ಒಂದು ವೇಳೆ 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಮುಂದಾದರೆ ಕಾಮನ್‌ವೆಲ್ತ್ ವಿವಾದದ ಬಗ್ಗೆಯೂ ಅದೇ ಬಗೆಯ ತನಿಖೆ ನಡೆಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ. ಆಗ ನಿಜವಾದ ಸತ್ಯವನ್ನು ಜನತೆಯ ಮುಂದಿಡಲು ಸಾಧ್ಯ ಎಂಬ ಭರವಸೆ ನನಗಿದೆ ಎಂದಿದ್ದಾರೆ.

‘ಹಗೆ ಸಾಧಿಸುವ ಉದ್ದೇಶದಿಂದ ನನ್ನ ವಿರುದ್ಧ ಕೆಲವರು ಪಿತೂರಿ ನಡೆಸಿದ್ದಾರೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ. ನನ್ನ ಮೇಲಿನ ಆರೋಪಗಳು ಸತ್ಯಕ್ಕೆ ದೂರವಾದವು. ಕ್ರೀಡಾಕೂಟಕ್ಕೆ ನಿಗದಿಪಡಿಸಿದ್ದ ಒಟ್ಟು ಮೊತ್ತದಲ್ಲಿ ಸಂಘಟನಾ ಸಮಿತಿಯ ಪಾಲು ಶೇ 5 ಮಾತ್ರವಾಗಿತ್ತು. ಆದರೂ ಇತರೆ ಪಾಲುದಾರರಾದ ದೆಹಲಿ ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳನ್ನು ಬಿಟ್ಟು ನನ್ನನ್ನು ಮಾತ್ರ ಗುರಿ ಮಾಡಲಾಗುತ್ತಿದೆ’ ಎಂದು ದೂರಿದ್ದಾರೆ.
 
‘ಕ್ರೀಡಾಕೂಟದ ಯಶಸ್ಸಿನ ಬಗ್ಗೆ ಕ್ರೀಡಾಪಟುಗಳು, ಅಧಿಕಾರಿಗಳು ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳು ಹೊಗಳಿಕೆಯ ಮಾತನಾಡಿವೆ. ಆದರೆ ಹಗರಣದಲ್ಲಿ ನನ್ನ ಶಾಮೀಲಿನ ಬಗ್ಗೆ ಮಾಧ್ಯಮಗಳು ಸತತವಾಗಿ ವರದಿ ಮಾಡುವ ಮೂಲಕ ನನ್ನ ಹೆಸರಿಗೆ ಧಕ್ಕೆ ಉಂಟು ಮಾಡಿವೆ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.